ರಾಮನಗರ: ಸಿಎಂ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲೇ ವೇದಿಕೆ ಮೇಲೆ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಗಲಾಟೆ ನಡೆದು, ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ ಘಟನೆ ನಡೆದಿದೆ.
ರಾಮನಗರಕ್ಕೆ ಭೇಟಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, ಕೆಲವರು ವೋಟ್ ಪಡೆದು ಸುಮ್ಮನೆ ಕುಳಿತುಕೊಳ್ಳುತ್ತಾರೆ. ನಮ್ಮ ಕಾಲದಲ್ಲೇ ಎಲ್ಲಾ ಕಾಮಗಾರಿಗಳಿಗೆ ಅಡಿಗಲ್ಲು, ನಮ್ಮ ಕಾಲದಲ್ಲೇ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾತು ಆರಂಭಿಸಿದ್ದಾರೆ.
ಸಚಿವರ ಮಾತಿನಿಂದ ಕೆರಳಿ ಕೆಂಡವಾದ ಸಂಸದ ಡಿ.ಕೆ.ಸುರೇಶ್ ಕುರ್ಚಿಯಿಂದ ಎದ್ದು ಬಂದು ಸಚಿವರಿಗೆ ದಬಾಯಿಸಿದ್ದಾರೆ. ಸಚಿವ ಅಶ್ವತ್ಥನಾರಾಯಣ ಮಾತನಾಡುತ್ತಿದ್ದ ಮೈಕ್ ಕಿತ್ತು ಬಿಸಾಕಿದ್ದಲ್ಲದೇ ಗಂಡಸ್ತನ ಕೆಲಸದಲ್ಲಿ ತೋರಿಸಿ. ಇಲ್ಲಿ ಬಂದು ಭಾಷಣ ಮಾಡುವುದಲ್ಲ ಎಂದು ರೇಗಾಡಿದ್ದಾರೆ. ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ಸಿಎಂ ರಾಜಕಾರಣ ಮಾಡಲು ಬಂದಿಲ್ಲ. ಅವರು ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಬಂದಿದ್ದಾರೆ. ಮುಖ್ಯಮಂತ್ರಿಗಳಿಗೆ ಅಗೌರವ ತೋರುವುದು ಸರಿಯಲ್ಲ ಎಂದು ಸಚಿವರು ಹೇಳುತ್ತಿದ್ದಂತೆ ಅಶ್ವತ್ಥ ನಾರಾಯಣ ಮೇಲೆಯೇ ಮುಗಿಬಿದ್ದ ಡಿ.ಕೆ.ಸುರೇಶ್ ಬಾಯಿಗೆ ಬಂದಂತೆ ಬಯ್ದಿದ್ದಾರೆ.
ಸಿಎಂ ಬೊಮ್ಮಾಯಿ ಎದುರಲ್ಲೇ ವೇದಿಕೆಯಲ್ಲಿ ಸಚಿವ-ಸಂಸದರ ನಡುವೆ ವಾಗ್ವಾದ ನಡೆದಿದೆ. ವೇದಿಕೆಯಲ್ಲಿಯೇ ಧರಣಿ ಕುಳಿತು ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸಚಿವರು ಹಾಗೂ ಸಂಸದರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಒಟ್ಟಾರೆ ರಾಮನಗರದಲ್ಲಿ ನಡೆದ ಸಿಎಂ ಕಾರ್ಯಕ್ರಮದ ವೇದಿಕೆಯಲ್ಲಿ ಹೈಡ್ರಾಮಾ ನಡೆದಿದ್ದು, ಜನಪ್ರತಿನಿಧಿಗಳ ನಡೆಯನ್ನು ಜನತೆ ಖಂಡಿಸಿದ್ದಾರೆ.