ಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ವಾಪಸ್ ಪಡೆದಿದ್ದಾರೆ. ಬದಲಿಗೆ ಮತ್ತೊಂದು ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ.
ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ನಾಳೆ ಅಂದ್ರೆ ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು.
ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದು, ಜನವರಿ 22ರಂದು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ವಾಟಾಳ್ ಸಿಎಂ ಭೇಟಿ ಬಳಿಕೆ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.
ಕರ್ನಾಟಕ ಬಂದ್ ಮಾಡಲು ಪಣತೊಟ್ಟಿದ್ದ ವಾಟಾಳ್ ನಾಗರಾಜ್ ಅವರನ್ನ ಮನವೊಲಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶ್ವಿಯಾಗಿದ್ದಾರೆ. ಬಂದ್‌ಗೆ ಇನ್ನೇನು ಒಂದು ದಿನ ಬಾಕಿ ಇರುವಾಗಲೇ ಕನ್ನಡ ಪರ ಸಂಘಟನೆಗಳ ಪ್ರಮುಖ ನಾಯಕರನ್ನ ಕರೆದು ಸಿಎಂ ಸಭೆ ನಡೆಸಿದರು.
ಕೃಷ್ಣ ಕಚೇರಿ ಸಿಎಂ ಸಭೆ ನಡೆಸಿದ್ದು, ಕರ್ನಾಟಕ ಬಂದ್ ಕೈಬಿಡುವಂತೆ ವಾಟಾಳ್ ನಾಗರಾಜ್‌ಗೆ ಮನವಿ ಮಾಡಿದ್ದಾರೆ. ಮುಂದೆ ಯಾವಗಾದರೂ ಬಂದ್ ಮಾಡಿ ಎಂದಿದ್ದಾರೆ. ಇದಕ್ಕೆ ವಾಟಾಳ್ ಒಪ್ಪಿಗೆ ಸೂಚಿಸಿದ್ದು. ಡಿ.31ರ ಬಂದ್ ಕೈಬಿಟ್ಟಿದ್ದಾರೆ.
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಬಂದ್ ಕರೆ ನೀಡಿದ್ದರು. ನಿನ್ನೆ(ಡಿ.29) ಬಂದ್ ವಾಪಸ್ ಪಡೆಯಲು ಮನವಿ ಮಾಡಿದ್ದೆ. ನನ್ನ ಮನವಿಗೆ ಅವರು ಸ್ಪಂದಿಸಿ ಬಂದ್ ವಾಪಸ್ ಪಡೆದಿದ್ದಾರೆ ಎಂದಿದ್ದಾರೆ.
ಬಂದ್ ಬದಲು ನಾಳೆ(ಡಿ. 31) ಬೆಳಗ್ಗೆ 10:30ಕ್ಕೆ ರ್ಯಾಲಿ ಮಾಡಲು ತೀರ್ಮಾನವಾಗಿದ್ದು, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಯಲಿದೆ.
ಟೌನ್ ಹಾಲ್ ನಿಂದ ಹೊರಟು ಮೈಸೂರ್ ಬ್ಯಾಂಕ್ ಸಿಗ್ನಲ್ ಮೂಲಕ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ತಲುಪಿ , ಆನಂದ್ ರಾವ್ ಫ್ಲೈ ಓವರ್ ಮುಖಾಂತರ ಫ್ರೀಡಂ ಪಾರ್ಕ್ ವರೆಗೆ ಕನ್ನಡ ಪರ ಸಂಘಟನೆಗಳು ರ್ಯಾಲಿ ನಡೆಸಲಿವೆ.
ಜನವರಿ 22ಕ್ಕೆ ಬಂದ್
ಇನ್ನು ಈ ಬಗ್ಗೆ ವಾಟಾಳ್ ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಂಇಎಸ್ ನಿಷೇಧ ಮಾಡುವುದಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಕರ್ನಾಟಕ ಬಂದ್ ಹಿಂಪಡೆಯುವಂತೆ ಸಿಎಂ ಕೋರಿಕೊಂಡರು. ಸಿಎಂ ಮನವಿಯ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಒಕ್ಕೂಟದ ಮುಖಂಡರು ತೀರ್ಮಾನ ಕೈಗೊಂಡು, ಹೊಸ ವರ್ಷಕ್ಕೆ ತೊಂದರೆಯಾಗಲಿದೆ, ಅದು ಸರಿಯಿಲ್ಲ ಎಂಬುದಾಗಿ ತೀರ್ಮಾನ ಕೈಗೊಂಡಿದ್ದು, ನಾಳಿನ(ಡಿ.31) ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿದೆ ಎಂದು ವಾಟಾಳ್ ನಾಗರಾಜ್ ಘೋಷಿಸಿದರು. ಜನವರಿ 22ಕ್ಕೆ ಬಂದ್ ಮಾಡುತ್ತೇವೆ ಎಂದು ಹೇಳಿದರು.