ಕುಂದಾಪುರ: ಕೋಟ ತಟ್ಟು ಗ್ರಾಮದ ಕೊರಗ ಸಮುದಾಯದವರ ಮೆಹೆಂದಿ ಮನೆಗೆ ನುಗ್ಗಿ ಕೋಟ ಠಾಣೆಯ ಪೊಲೀಸರು ನುಗ್ಗಿ ದಾಂಧಲೆ ನಡೆಸಿ ಲಾಠಿ ಚಾರ್ಜ್ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಸೋಮವಾರ ಸಂಜೆ ಕೋಟ ತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದವರೊಬ್ಬರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಡಿಜೆ ಹಾಕಿರುವುದನ್ನು ಆಕ್ಷೇಪಿಸಿ ಸ್ಥಳೀಯರು 112 ಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ಕೋಟ ಪೊಲೀಸರು ಸ್ಥಳಕ್ಕೆ ಹೋಗಿ ಕಾರ್ಯಕ್ರಮದಲ್ಲಿ ಇದ್ದವರಿಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಲ್ಲಿ ಮದುಮಗ ಸೇರಿದಂತೆ ಹಲವರ ಮೇಲೆ ಹಲ್ಲೆಯಾಗಿದ್ದು, ಸಮುದಾಯದ ಮುಖಂಡರನ್ನು ಠಾಣೆಗೆ ಕರೆಸಿ ಅಂಗಿ ಬಿಚ್ಚಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳು ವೈರಲ್ ಆಗುತ್ತಿದ್ದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಟ ತಟ್ಟುವಿನ ಕೊರಗ ಕಾಲೋನಿಯದ ಚಿಟ್ಟು ಬೆಟ್ಟುವಿನಲ್ಲಿ ಮದುವೆಯ ಮುನ್ನ ದಿನವಾದ ಸೋಮವಾರ ರಾತ್ರಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿರುವಾಗ ಪೊಲೀಸರು ಏಕಾಏಕಿ ನುಗ್ಗಿ ಲಾಠಿಚಾರ್ಜ್ ನಡೆಸಿದ ಆರೋಪ ಇದೆ. ದುರ್ಬಲ ಸಮುದಾಯದ ವಿರುದ್ಧದ ಈ ರೀತಿಯ ವರ್ತನೆಯನ್ನು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ತೀವ್ರವಾಗಿ ಖಂಡಿಸಿದೆ. ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಗಳು ಸೇರಿ ಈ ರೀತಿಯ ವರ್ತನೆ ಮಾಡಿರುವ ಕುರಿತು ಆರೋಪ ಕೇಳಿ ಬಂದಿದೆ.