ಸುಬ್ರಹ್ಮಣ್ಯ: ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭಾನುವಾರ ರಾತ್ರಿ ಆಗಮಿಸಿ ವಾಸ್ತವ್ಯ ಹೂಡಿದರು.
ಸೋಮವಾರ ಬೆಳಗ್ಗೆ ಶ್ರೀ ದೇವಳಕ್ಕೆ ಆಗಮಿಸಿದ ಅವರು, ಶ್ರೀ ದೇವರ ದರುಶನ ಪಡೆದರು. ಬಳಿಕ ಪವಿತ್ರ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದರು. ಸೋಮವಾರ ಸುಬ್ರಹ್ಮಣ್ಯದಲ್ಲೇ ವಾಸ್ತವ್ಯವಾಗಿರುವ ನ್ಯಾಯಧೀಶರು ಇಂದು ಇಲ್ಲಿಂದ ನಿರ್ಗಮಿಸಲಿದ್ದು, ಬಳಿಕ ಜಿಲ್ಲೆಯ ವಿವಿಧೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕ್ಷೇತ್ರಕ್ಕೆ ಆಗಮಿಸಿದ ನ್ಯಾಯಮೂರ್ತಿಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಗೌರವ ನೀಡಿ, ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ, ಹಿರಿಯ ನ್ಯಾಯಾಧೀಶ ಸೋಮಶೇಖರ್, ಕಿರಿಯ ನ್ಯಾಯಧೀಶ ಯಶವಂತ ಕುಮಾರ್, ಅಧಿಕಾರಿಗಳು, ನ್ಯಾಯಧೀಶರು, ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.