ಮಂಗಳೂರು: ಓಮಿಕ್ರಾನ್ ಆತಂಕದ ಹಿನ್ನಲೆ ನಾಳೆಯಿಂದ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿಗೊಳಿಸಿರುವ ರಾಜ್ಯ ಸರಕಾರದ ಆದೇಶ ಕರಾವಳಿಯಲ್ಲಿ ನಡೆಯುವ ಯಕ್ಷಗಾನ ಹಾಗೂ ಕಂಬಳಕ್ಕೂ ಅನ್ವಯಿಸಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ನೈಟ್ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುವುದು. ಕಂಬಳ, ಯಕ್ಷಗಾನ ಸೇರಿದಂತೆ ರಾತ್ರಿ ನಡೆಯುವಂತಹ ಕಾರ್ಯಕ್ರಮಗಳನ್ನು 10 ಗಂಟೆಯೊಳಗೆ ಮುಗಿಸಬೇಕು, ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.
ರಾತ್ರಿ ವೇಳೆ ನಡೆಯುವಂತಹ ಯಕ್ಷಗಾನ, ಕಂಬಳಗಳನ್ನು ಬೇಗನೆ ಆರಂಭಿಸಿ, ನೈಟ್ ಕರ್ಫ್ಯೂ ಅವಧಿ ಆರಂಭವಾಗುವುದರೊಳಗೆ ಮುಗಿಸಬೇಕು. ನೈಟ್ ಕರ್ಫ್ಯೂ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯ ಆಗುವುದರಿಂದ, ನಿಯಮ ಸಡಿಲಗೊಳಿಸುವ ನಿರ್ಧಾರವೂ ಸರ್ಕಾರದ ಮಟ್ಟದಲ್ಲಿಯೇ ಆಗಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.