Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು.

Ad Widget . Ad Widget .

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಸಂಪನ್ಮೂಲಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸುವಿರಿ
ಇತರರ ಕೆಲಸಗಳ ಯಶಸ್ಸಿಗಾಗಿ ಸಲಹೆ ನೀಡುವ ಅವಕಾಶ ದೊರೆಯುತ್ತದೆ. ಈ ಹಿಂದೆ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಪುನಃ ಆರಂಭಿಸಲು ಸೂಕ್ತ ಆಲೋಚನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇದ್ದೇ ಇರುತ್ತದೆ. ಸದ್ಯದಲ್ಲೇ ಕೌಟುಂಬಿಕ ಸಮಸ್ಯೆಗಳು ಎದುರಾದರೂ ನಂತರ ತಿಳಿಯಾಗುತ್ತವೆ. ಹೊಸ ವ್ಯವಹಾರದಲ್ಲಿ ಭಾಗವಹಿಸಲು ಅವಕಾಶವನ್ನು ಪಡೆಯುವ ಯತ್ನದಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಹಿರಿಯರಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಕಲ್ಲು ಗಣಿಗಾರಿಕೆ ಮಾಡುವವರಿಗೆ ಬೇಡಿಕೆ ಹೆಚ್ಚಾಗಿ ವ್ಯವಹಾರಗಳು ಹೆಚ್ಚಾಗುತ್ತವೆ. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನಗಳು ಈ ವಾರ ಕೈತಲುಪುವ ಸಾಧ್ಯತೆಯಿದೆ.

Ad Widget . Ad Widget .

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವವರಿಗೆ ಮಾನ್ಯತೆ ಮತ್ತು ಗೌರವ ದೊರೆಯುತ್ತದೆ. ಹಣಕಾಸಿನ ಸ್ಥಿತಿಯು ಉತ್ತಮ. ತಾಯಿಯ ಹಿತನುಡಿಗಳು ನಿಮಗೆ ಒಳಿತನ್ನು ಮಾಡುತ್ತವೆ. ವಿನಾಕಾರಣ ವಿವಾದಗಳನ್ನು ಯಾರೊಂದಿಗೂ ಮಾಡದಿರಿ. ನಿಮ್ಮ ವ್ಯವಹಾರದಲ್ಲಿ ಸಾಮಾನ್ಯ ಅಭಿವೃದ್ಧಿಯನ್ನು ಖಂಡಿತ ಕಾಣಬಹುದು. ಮನೆಬಳಕೆಯ ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ವಿಪರೀತ ಕೆಲಸದ ನಡುವೆ ದೇಹಾಲಸ್ಯ ಆಗಬಹುದು. ಈ ಸಂದರ್ಭದಲ್ಲಿ ಮಿತ್ರರ ಸಹಾಯ ದೊರೆತು ಕೆಲಸ ಪೂರ್ಣವಾಗುವುದು. ನ್ಯಾಯಾಲಯದಲ್ಲಿನ ವ್ಯವಹಾರಗಳಿಗೆ ಅಡತಡೆ ಬರುವ ಸಾಧ್ಯತೆಗಳಿವೆ. ನೂತನ ವಾಹನ ಖರೀದಿಯ ಅವಕಾಶಗಳಿದ್ದರೂ ಹಣಕಾಸಿನ ಸ್ಥಿತಿಯನ್ನು ಅರಿತು ನಡೆಯುವುದು ಒಳ್ಳೆಯದು

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3):
ವೈಯಕ್ತಿಕ ವ್ಯವಹಾರಗಳ ಹೋರಾಟದಲ್ಲಿ ಪ್ರಗತಿಯನ್ನು ಕಾಣುವಿರಿ. ಮನೆಯವರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತಿ ಅಗತ್ಯ. ಕೆಲವರಿಗೆ ಅಧ್ಯಯನದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಸಂದರ್ಭವಿರುತ್ತದೆ. ಆರ್ಥಿಕ ಸಬಲತೆಗಾಗಿ ಹೊಸ ಹೊಸ ದಾರಿಗಳನ್ನು ಹುಡುಕುವಿರಿ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸವೊಂದು ಈಗ ಕೈಗೂಡುವುದು. ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ವಾರ್ತೆಯನ್ನು ಕೇಳುವಿರಿ. ಅತಿಯಾದ ಜಿಪುಣತನ ಮಾಡಿ ಕುಟುಂಬದವರ ಎದುರು ಮುಜುಗರಕ್ಕೆ ಒಳಗಾಗುವಿರಿ. ಕೆಲಸಗಳ ಒತ್ತಡದ ನಡುವೆಯೂ ಇನ್ನೊಬ್ಬರಿಗೆ ಸಹಾಯ ಮಾಡಿ ಸಂತೋಷ ಪಡುವಿರಿ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ):
ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ಇತರರ ಅಭಿವೃದ್ಧಿಯ ಬಗ್ಗೆ ಚಿಂತೆ ಮಾಡದೆ ನಿಮ್ಮ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿರಿ. ಕ್ರೀಡಾಪಟುಗಳಿಗೆ ಅವರ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶ ದೊರೆಯಬಹುದು. ಹಣದ ಒಳಹರಿವು ಉತ್ತಮವಾಗಿದ್ದು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ವಿವಾದಿತ ವಿಷಯವೊಂದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಕೋರ್ಟ್‌ ಹಾಗೂ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆಯನ್ನು ಖಂಡಿತ ಕಾಣಬಹುದು. ಹತ್ತಿ ಬಟ್ಟೆಯನ್ನು ತಯಾರು ಮಾಡಿ ಮಾರುವವರಿಗೆ ವ್ಯವಹಾರದ ವಿಸ್ತರಣೆ ಇರುತ್ತದೆ. ಸಂಗೀತಗಾರರಿಗೆ ಹೊಸ ವೇದಿಕೆಗಳು ದೊರಕುವುದರ ಜೊತೆಗೆ ಹೆಚ್ಚಿನ ಸಂಪಾದನೆ ಆಗುತ್ತದೆ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1):
ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ಹಣಕಾಸಿನ ಅನುಕೂಲ ತಕ್ಕಮಟ್ಟಿಗೆ ಹೆಚ್ಚಾಗುತ್ತದೆ. ನಿಮ್ಮ ಸಮಾಜದ ಪ್ರಮುಖರೊಂದಿಗೆ ಬಾಂಧವ್ಯ ವೃದ್ಧಿಸುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಕೂಡಿ ಬರುವ ಸಾಧ್ಯತೆಗಳಿದೆ. ವಾಹನ ಚಾಲನೆ ವೇಳೆ ಸ್ವಲ್ಪ ಎಚ್ಚರವಾಗಿರಿ. ಪಾಲುಗಾರಿಕೆ ವ್ಯವಹಾರದಲ್ಲಿ ಹೊಸ ತಿರುವು ಬಂದು ನಿಮಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ಬರುತ್ತದೆ. ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿವೆ. ಮಹಿಳಾ ರಾಜಕಾರಣಿಗಳಿಗೆ ಜನ ಬೆಂಬಲದ ಜೊತೆಗೆ ತಕ್ಕ ಹುದ್ದೆಯೂ ದೊರೆಯುತ್ತದೆ. ಕೆಲವರಿಗೆ ಗುಹ್ಯ ರೋಗಗಳು ಕಾಣಿಸಬಹುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಪ್ರಗತಿಯನ್ನು ಕಾಣಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2):
ಧೃಡ ಸಂಕಲ್ಪದಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುವವು. ಕೃಷಿ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಮೂಡಿ ಅದರಲ್ಲಿ ತೊಡಗಿಕೊಳ್ಳುವಿರಿ. ನೃತ್ಯ ಕಲಾವಿದರುಗಳಿಗೆ ಹೆಚ್ಚಿನ ಕೆಲಸಗಳು ದೊರೆತು ಸಂಪಾದನೆ ಹೆಚ್ಚುತ್ತದೆ. ಹಿರಿಯರ ಬಗ್ಗೆ ಗೌರವ ತೋರುವುದು ಒಳ್ಳೆಯದು. ಅನವಶ್ಯಕವಾಗಿ ಇತರರನ್ನು ಹೀಗಳೆಯುವುದು ನಿಮಗೆ ನಷ್ಟ ಕೊಡುವುದು. ದೂರ ಪ್ರಯಾಣದಲ್ಲಿ ಸಂಕಟಗಳು ಎದುರಾಗಬಹುದು. ಭೂಮಿಯ ವ್ಯವಹಾರದಿಂದ ಹೆಚ್ಚಿನ ಲಾಭ ಇರುತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯುವ ಸಂದರ್ಭವಿದೆ. ವಿದೇಶಗಳಿಗೆ ಬಟ್ಟೆ ಮತ್ತು ಆಭರಣಗಳನ್ನು ರಫ್ತು ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3):
ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಬಹುದು. ರಾಜಕಾರಣಕ್ಕೆ ಸೇರಬೇಕೆನ್ನುವವರು ತಮ್ಮ ಸ್ಥಾನಮಾನಗಳ ಬಗ್ಗೆ ಸರಿಯಾಗಿ ತಿಳಿಯುವುದು ಉತ್ತಮ. ಗೃಹನಿರ್ಮಾಣ ಮಾಡುವವರಿಗೆ ಉತ್ತಮ ಸಹಕಾರಗಳು ದೊರೆಯುತ್ತವೆ. ಹೂಡಿಕೆ ವ್ಯವಹಾರಗಳಿಂದ ಹೆಚ್ಚಿನ ಹಣ ಬರುತ್ತದೆ. ವಿದ್ಯುತ್ ಕ್ಷೇತ್ರದಲ್ಲಿ ಉತ್ಪಾದಕರಾಗಿರುವವರಿಗೆ ಬೇಡಿಕೆ ಬಂದು ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಕೆಲವು ಸಮಸ್ಯೆಗಳನ್ನು ಕುಳಿತು ಆಲೋಚನೆ ಮಾಡಿದಲ್ಲಿ ಪರಿಹಾರದ ದಾರಿ ಶೀಘ್ರವಾಗಿ ದೊರೆಯುತ್ತದೆ. ಹೊಸದಾಗಿ ಕೃಷಿಭೂಮಿಯನ್ನು ಕೊಳ್ಳುವ ಶಕ್ತಿಯನ್ನು ತೋರಿಸುವಿರಿ. ಒರಟುತನದ ಮಾತುಗಳಿಂದ ಜನರ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಚ್ಚರ ವಹಿಸಿರಿ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ):
ವಿದ್ಯುತ್ ಉಪಕರಣಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಬಗೆಹರಿಯಬೇಕಿದ್ದ ವ್ಯಾಜ್ಯಗಳು ಸ್ವಲ್ಪ ಕಾಲ ವಿಳಂಬವಾಗುತ್ತದೆ. ನಯವಂಚಕರಿಂದ ನಿಮ್ಮ ಹಣ ಸಾಕಷ್ಟು ಪೋಲಾಗಬಹುದು. ಸ್ವಲ್ಪ ಎಚ್ಚರವಾಗಿರಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿಯನ್ನು ಕಂಡರೂ ಸಾಮಾಜಿಕ ಜೀವನದಲ್ಲಿ ಕಳಂಕ ಬರುವ ಸಾಧ್ಯತೆ ಇದೆ. ಸಂದೇಹಾಸ್ಪದ ವ್ಯಕ್ತಿಗಳಿಂದ ದೂರವಿರುವುದು ಬಹಳ ಒಳ್ಳೆಯದು. ಸಾಹಸ ಕಲಾವಿದರುಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಬುದ್ದಿವಂತಿಕೆಯಿಂದ ವ್ಯವಹಾರದಲ್ಲಿ ಕೆಲವು ಉತ್ತಮ ನಿರ್ಣಯಗಳನ್ನು ಕೈಗೊಳ್ಳುವಿರಿ. ಸಾರಿಗೆ ವ್ಯವಹಾರದಿಂದ ಆದಾಯ ಹೆಚ್ಚುವುದು. ವಿದೇಶಿ ಹಣವನ್ನು ವರ್ಗಾವಣೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಧನ ಆದಾಯವು ನಿರೀಕ್ಷೆಯಷ್ಟಿರುತ್ತದೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 ):
ಬಹಳ ದಿನಗಳಿಂದ ಅನಾರೋಗ್ಯ ಪೀಡಿತರಾದ ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಹೊಸ ವಾಹನದ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ದಿನಸಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಿ ಸಹಕಾರ ನೀಡುವ ನಿಮ್ಮ ಮನೋಭಾವಕ್ಕೆ ಗೌರವ ದೊರೆಯುತ್ತದೆ. ನ್ಯಾಯವಾದಿಗಳಿಗೆ ವಾದಗಳಲ್ಲಿ ಜಯ ದೊರೆತು ಗೌರವ ಹೆಚ್ಚುತ್ತದೆ. ಕಬ್ಬಿಣ ಮತ್ತು ಉಕ್ಕನ್ನು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹೆಚ್ಚು ವ್ಯಾಪಾರವಾಗಿ ಆದಾಯ ಹೆಚ್ಚುತ್ತದೆ. ಷೇರುಪೇಟೆ ವ್ಯವಹಾರ ಮಾಡುವ ಕೆಲವರಿಗೆ ಆದಾಯವನ್ನು ನಿರೀಕ್ಷಿಸಬಹುದು. ಹೆಣ್ಣು ಮಕ್ಕಳಿಗೆ ತಾಯಿಯ ಕಡೆಯಿಂದ ಉಡುಗೊರೆ ದೊರೆಯಬಹುದು.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2):
ಆದಾಯದಲ್ಲಿ ಏರಿಕೆ ಕಂಡು ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ಸ್ವಯಂ ಉದ್ಯೋಗ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಊಟ ತಿಂಡಿಗಳನ್ನು ಅಲ್ಪಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಲೇಖಕರು ಹೊಸ ವಿಚಾರದ ಬಗ್ಗೆ ಚಿಂತನ ಮಂಥನ ನಡೆಸಿ ಹೊಸ ಪ್ರಬಂಧವನ್ನು ಬರೆಯುವರು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಏರಿಕೆ ಇರುತ್ತದೆ. ತಾಯಿಯು ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ವೃತ್ತಿಯಲ್ಲಿ ಸ್ವಲ್ಪ ಅಭಿವೃದ್ಧಿಯನ್ನು ಕಾಣಬಹುದು. ಸರ್ಕಾರಿ ಗುತ್ತಿಗೆದಾರರಿಗೆ ಗುತ್ತಿಗೆ ಹಣ ಬರುವುದು ವಿಳಂಬವಾಗಬಹುದು.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3):
ಹಣಕಾಸಿನ ಅನುಕೂಲದಲ್ಲಿ ತುಸು ಏರಿಕೆಯನ್ನು ಕಾಣಬಹುದು. ಹಿರಿಯರಿಗೆ ಕೆಲವೊಂದು ಸಂಸ್ಥೆಗಳ ನಾಯಕತ್ವವನ್ನು ವಹಿಸುವ ಅವಕಾಶ ದೊರೆಯುತ್ತದೆ. ಶೃಂಗಾರ ಸಾಧನಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಆಲೋಚನೆ ಸದ್ಯಕ್ಕೆ ಬೇಡ. ಯುವಕರ ಅತಿಯಾದ ಆತ್ಮವಿಶ್ವಾಸವು ಅವರನ್ನು ನಗೆಪಾಟಲಿಗೆ ದೂಡುವ ಸಾಧ್ಯತೆ ಇದೆ. ಕೆಲವರ ಪ್ರೀತಿ ಪ್ರೇಮ ಬಹಿರಂಗಗೊಂಡು ಹಿರಿಯರು ಅದನ್ನು ಒಪ್ಪುವ ಸಾಧ್ಯತೆಗಳಿವೆ. ಬೆಂಕಿಯೊಡನೆ ಕೆಲಸ ಮಾಡುವವರು ಎಚ್ಚರವಾಗಿರುವುದು ಒಳ್ಳೆಯದು. ವಿದೇಶದಲ್ಲಿ ಸ್ಥಿರಾಸ್ತಿಯನ್ನು ಮಾಡಬೇಕೆನ್ನುವವರಿಗೆ ಈಗ ಉತ್ತಮ ಕಾಲ. ಮಕ್ಕಳ ಅಭಿವೃದ್ಧಿಯ ಬಗ್ಗೆ ಸಂತೋಷದ ವಾರ್ತೆಗಳನ್ನು ಕೇಳುವಿರಿ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ):
ಎದುರಾಳಿಗಳ ಕಾರ್ಯತಂತ್ರಗಳು ವಿಫಲವಾಗಿ ನಿಮಗೆ ಜಯ ದೊರೆಯುತ್ತದೆ. ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅವರ ವಿಷಯದ ಆಯ್ಕೆಯ ಬಗ್ಗೆ ಗೊಂದಲಗಳು ಉಂಟಾಗುತ್ತವೆ. ಸಂಗಾತಿಯ ಸಹಕಾರದಿಂದ ಸ್ವಯಂ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಸಾಧಿಸುವಿರಿ. ಕಟ್ಟಡ ಕಟ್ಟುವ ಕಾರ್ಮಿಕರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ವೈದ್ಯವೃತಿಯಲ್ಲಿ ಇರುವವರ ಆದಾಯ ಹೆಚ್ಚುತ್ತದೆ. ವಾಣಿಜ್ಯ ಬೆಳೆಗಳ ದಲ್ಲಾಳಿಗಳಿಗೆ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಒಡಹುಟ್ಟಿದವರ ನಡುವಿನ ಸಂಬಂಧ ಸ್ವಲ್ಪ ಕಡಿಮೆಯಾಗುವುದು. ಸಿದ್ಧವಸ್ತ್ರಗಳನ್ನು ಮಾರಾಟ ಮಾಡುವವರ ವ್ಯವಹಾರ ಹೆಚ್ಚಾಗುತ್ತದೆ. ಮನಸ್ಸಿನ ನೆಮ್ಮದಿಗಾಗಿ ದೈವ ಕಾರ್ಯವನ್ನು ಹಮ್ಮಿಕೊಳ್ಳುವಿರಿ.

Leave a Comment

Your email address will not be published. Required fields are marked *