ಮುಂಬೈ: ಮಧ್ಯರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತು ಅವಳ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸುವುದು ಮಾನ ಭಂಗಗೊಳಿಸಲು ಯತ್ನಿಸಿದಂತೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪರಿಚಿತರು ಮಹಿಳೆಯ ದೇಹದ ಯಾವುದೇ ಭಾಗವನ್ನು ಮುಟ್ಟಿದರೆ, ಅದು ಅಪಮಾನವೆಸಗಿದಂತೆ ಎಂದು ಕೋರ್ಟ್ ಹೇಳಿದೆ.
ಔರಂಗಾಬಾದ್ ದ ಜಲ್ನಾ ಜಿಲ್ಲೆಯ ನಿವಾಸಿ 36 ವರ್ಷದ ಪರಮೇಶ್ವರ್ ಧಾಗೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಅಪರಾಧಿಗೆ ಕೋರ್ಟ್ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ.
ಜುಲೈ 2014 ರಲ್ಲಿ ಧಾಗೆ ಸಂಜೆ ಸಂತ್ರಸ್ತೆಯ ಮನೆಗೆ ಹೋಗಿ ಆಕೆ ಪತಿ ಬಗ್ಗೆ ವಿಚಾರಿಸಿದ್ದ. ಪತಿ ಬೇರೆ ಊರಿಗೆ ಹೋಗಿದ್ದಾನೆ. ಇಂದು ರಾತ್ರಿ ಬರುವುದಿಲ್ಲ ಎಂದು ಮಹಿಳೆ ಹೇಳಿದ್ದಳು. ಮತ್ತೆ ರಾತ್ರಿ 11 ಗಂಟೆಗೆ ಸಂತ್ರಸ್ತೆಯ ಮನೆಗೆ ಧಾಗೆ ಹೋಗಿದ್ದ. ಆಕೆ ಮಲಗಿದ್ದಾಗ ಒಳಗಡೆ ಹೋಗಿ ಆಕೆ ಮಂಚದ ಮೇಲೆ ಕುಳಿತು ಪಾದಗಳನ್ನು ಸ್ಪರ್ಶಿಸಿದ್ದ. ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗುವ ಉದ್ದೇಶ ನನಗಿರಲಿಲ್ಲವೆಂದು ಧಾಗೆ ಪರ ವಕೀಲರು ವಾದಿಸಿದ್ದರು.
ಆದ್ರೆ ಮಧ್ಯರಾತ್ರಿ, ಮಹಿಳೆ ಹಾಸಿಗೆ ಮೇಲೆ ಕುಳಿತು ಆಕೆ ಪಾದಗಳನ್ನು ಸ್ಪರ್ಶಿಸಲು ಬೇರೆ ಉದ್ದೇಶವಿರುವುದಿಲ್ಲ. ಈ ನಡವಳಿಕೆ ಲೈಂಗಿಕ ಉದ್ದೇಶದಿಂದ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಕೋರ್ಟ್ ಹೇಳಿದೆ. ಅಂದ ಹಾಗೆ ಮಧ್ಯರಾತ್ರಿ ಆಕೆ ಮನೆಗೆ ಏಕೆ ಹೋಗಿದ್ದೆ ಎಂಬುದಕ್ಕೆ ಸ್ಪಷ್ಟ ಕಾರಣ ನೀಡಲು ವಿಫಲನಾಗಿದ್ದಾನೆ ಎಂದು ಕೋರ್ಟ್ ಹೇಳಿದೆ.