ಬೆಂಗಳೂರು: ಸ್ಯಾಂಡಲ್‌ವುಡ್ ನ ಹಿರಿಯ ನಿರ್ದೇಶಕ ಕೆ.ವಿ.ರಾಜು ಬದುಕಿನ ಯಾತ್ರೆ ಮುಗಿಸಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಹಿರಿಯ ನಿರ್ದೇಶಕ ಕೆ.ವಿ.ರಾಜು ಇಹಲೋಕ ತ್ಯಜಿಸಿದ್ದಾರೆ. ಹುಲಿಯಾ, ಬೆಳ್ಳಿ ಮೋಡ, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ಧಕಾಂಡ ಸೇರಿ ಹಲವು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಚಿತ್ರಕ್ಕೂ ಅವರು ನಿರ್ದೇಶಿಸಿದ್ದರು.
ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಮನೆಯಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೆ ಇಂದು ರಾಜಾಜಿನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ರಾಜಾಜಿನಗರದ ನಿವಾಸದಲ್ಲಿ ರಾಜು ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇನ್ನೂ ಹಿರಿಯ ನಿದೇರ್ಶಕ ಸಾವಿಗೆ ಸ್ಯಾಂಡಲ್‌ವುಡ್ ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ. ಈಗಾಗಲೇ ಸಾಲುಸಾಲು ಆಘಾತದಿಂದ ಕುಗ್ಗಿರುವ ಕನ್ನಡ ಚಿತ್ರರಂಗ, ಹಿರಿಯ ನಿರ್ದೇಶಕ, ಬರಹಗಾರ ರಾಜು ಅವರ ನಿಧನದಿಂದ ಮತ್ತಷ್ಟು ಬಡವಾಗಿದೆ.