ಮುಂಬೈ: ಹಲವು ಕಾಲದ ದೈಹಿಕ ಸಂಬಂಧದ ನಂತರ ಮದುವೆ ಮಾಡಿಕೊಳ್ಳಲು ನಿರಾಕರಿಸಿದರೆ, ಅದನ್ನು ವಂಚನೆ ಎನ್ನಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರಿನ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಹೇಳಿದೆ.
ಮಹಿಳೆಯೋರ್ವರು ತನ್ನ ಪ್ರಿಯಕರನ ಮೇಲೆ ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲು ಮಾಡಿದ್ದರು. ಮದುವೆಯ ಭರವಸೆ ನೀಡಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿ ನಂತರ ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ, ಫೆಬ್ರವರಿ 19, 1999 ರಂದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಆರೋಪಿಯನ್ನು ಅತ್ಯಾಚಾರ ಆರೋಪದಿಂದ ಖುಲಾಸೆಗೊಳಿಸಿದ್ದರು. ಆದರೆ ವಂಚನೆ ಆರೋಪ ದೂರು ಮುಂದುವರೆದಿತ್ತು. ಮದುವೆಯ ಭರವಸೆಯ ಮೇರೆಗೆ ಮೂರು ವರ್ಷಗಳ ಕಾಲ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪಿಗೆ ನ್ಯಾಯಾಲಯ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ಆದೇಶವನ್ನು ಆತ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಹೈಕೋರ್ಟ್ ನ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಅವರ ಏಕ ಸದಸ್ಯ ಪೀಠವು ಅತನನ್ನು ವಂಚನೆ ಆರೋಪದಿಂದ ಮುಕ್ತಗೊಳಿಸಿದ್ದು, ದೀರ್ಘಕಾಲದ ಸೆಕ್ಸ್ ಬಳಿಕ ಮದುವೆ ನಿರಾಕರಿಸಿದರೆ ಅದು ವಂಚನೆ ಅಲ್ಲ ಎಂದು ಹೇಳಿದೆ.