ಬೆಂಗಳೂರು : ಈ ಬಾರಿ ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲು ತೀರ್ಮಾನಿಸಿದೆ.
ರಾಜ್ಯದಲ್ಲಿ 10 ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈ ಬಾರಿ ಬಹು ಆಯ್ಕೆ ಪ್ರಶ್ನೆಗಳನ್ನು ಕೈಬಿಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ವಿವರಣಾತ್ಮಕ ಉತ್ತರಗಳನ್ನು ಬರೆಯಲು ತಯಾರಿ ಮಾಡಬೇಕಾಗುತ್ತದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2021 ಬೋರ್ಡ್ ಪರೀಕ್ಷೆಗಳಲ್ಲಿ ಅಳವಡಿಸಲಾದ ಬಹು ಆಯ್ಕೆಯ ಪ್ರಶ್ನೆಗಳನ್ನು ಹಿಂತೆಗೆದುಕೊಂಡಿದೆ. ಹಿಂದಿನ ಮಾದರಿಯ ವಿವರಣಾತ್ಮಕ ಮಾದರಿಯ ಪ್ರಶ್ನೆಗಳಿಗೆ ಮರಳಿದೆ. ಮಾರ್ಚ್-ಏಪ್ರಿಲ್ 2022 ರ ಪೂರ್ವಸಿದ್ಧತಾ ಮತ್ತು ಅಂತಿಮ ಪರೀಕ್ಷೆಗಳನ್ನು ನಡೆಸಲು ಮಾರ್ಗಸೂಚಿಗಳಿಗಾಗಿ ಇತ್ತೀಚೆಗೆ ಹೊರಡಿಸಲಾದ ಅಧಿಸೂಚನೆಯಲ್ಲಿ ಬದಲಾವಣೆಯನ್ನು ನಿರ್ದಿಷ್ಟಪಡಿಸಿದೆ.
ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಸಂಪೂರ್ಣ ಬಹುಆಯ್ಕೆ ಪ್ರಶ್ನೆ ಪದ್ದತಿ ಕೈಬಿಟ್ಟು ಮೊದಲಿನಂತೆ ವಿವರವಾಗಿ ಉತ್ತರ ಬರೆಯುವ ಪದ್ದತಿ ಜಾರಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುಆಯ್ಕೆ ಪ್ರಶ್ನೆ ಪದ್ದತಿಯನ್ನು ಜಾರಿಗೆ ತರಲಾಗಿತ್ತು.
ಪ್ರಥಮ ಭಾಷೆ ಹೊರತು ಪಡಿಸಿ ಉಳಿದ ವಿಷಯಗಳಿಗೆ 100 ಅಂಕಗಳನ್ನು ನಿಗದಿಪಡಿಲಾಗಿದೆ. ಇದರಲ್ಲಿ 20 ಅಂಕಗಳಿಗೆ ಆಂತರಿಕ ಪರೀಕ್ಷೆ ನಡೆಸಲಾಗುತ್ತದೆ. ಪ್ರಥಮ ಭಾಷೆಗೆ ಮಾತ್ರ 125 ಅಂಕಗಳನ್ನು ನಿಗದಿಪಡಿಸಲಾಗಿದೆ.
ಮಕ್ಕಳಲ್ಲಿ ಬರವಣಿಗೆ ಕೌಶಲ ಹಾಗೂ ಜ್ಞಾನಮಟ್ಟ ಬೆಳೆಯುವುದು ಮುಖ್ಯ. ಬಹು ಆಯ್ಕೆ ಪ್ರಶ್ನೆಗಳಿಂದ ವಿದ್ಯಾರ್ಥಿಗಳು ಬರೆಯುವುದನ್ನು ಮರೆಯುತ್ತಾರೆ. ಇದನ್ನು ಕೆಲವರು ಸ್ವಾಗತಿಸಿದರೆ, ಕೆಲವರು ಒಂದೊಂದು ಪದ್ಧತಿಯಲ್ಲಿ ಮಧ್ಯ ವಾರ್ಷಿಕ ಮತ್ತು ಅಂತಿಮ ಪರೀಕ್ಷೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.