ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಶುಕ್ರವಾರ ಜರುಗಿದ ಅನಸೂಯಾ ದೇವಿ ಪೂಜಾ ಕಾರ್ಯದಲ್ಲಿ ನಾಡಿನ ವಿವಿಧೆಡೆ ಮಹಿಳೆಯರು ಪಾಲ್ಗೊಂಡಿದ್ದರು. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿ ಪುನೀತಭಾವ ಮೆರೆದರು.
ಭಕ್ತೆಯರು ಬೆಳಿಗ್ಗೆ ನಗರದಲ್ಲಿ ಸಂಕೀರ್ತನಾ ಯಾತ್ರೆ ಮುಗಿಸಿ ವಾಹನಗಳಲ್ಲಿ ಗಿರಿಗೆ ತೆರಳಿದರು. ಗಿರಿಯಲ್ಲಿ ಸಾಲಾಗಿ ಗುಹೆಯೊಳಗೆ ತೆರಳಿ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು.
ಗಿರಿಯಲ್ಲಿ ಸಭಾಮಂಟಪದಲ್ಲಿ ಅನಸೂಯಾ ದೇವಿ, ಅತ್ರಿ ಮಹರ್ಷಿ, ಶ್ರೀಗುರುದತ್ತಾತ್ರೇಯರ ಮೂರ್ತಿಗಳಿಗೆ ವಿವಿಧ ಪೂಜೆಗಳು ನೆರವೇರಿದವು. ಗಣಪತಿ ಹೋಮ, ದುರ್ಗಾ ಪೂಜೆ ಕೈಂಕರ್ಯಗಳು ಜರುಗಿದವು. ಅರ್ಚಕ ಕೇಶವಮೂರ್ತಿ ಅವರು ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ದತ್ತ ಜಯಂತಿ ಪ್ರಯುಕ್ತ ಚಿಕ್ಕಮಗಳೂರು ನಗರ ಮತ್ತು ಗಿರಿಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಎಎಸ್ಪಿ ಎನ್.ಎಸ್. ಶ್ರುತಿ ಇದ್ದರು.