ಹೈದರಾಬಾದ್:ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರಿಗೆ ಕೀಹೋಲ್ ಶಸ್ತ್ರಚಿಕಿತ್ಸೆ ನಡೆಸಿ 156 ಕಿಡ್ನಿ ಕಲ್ಲುಗಳನ್ನು ಹೊರತೆಗೆದ ಅಪರೂಪದ ಪ್ರಕರಣ ವರದಿಯಾಗಿದೆ. ದೊಡ್ಡ ಶಸ್ತ್ರಚಿಕಿತ್ಸೆ ಬದಲಾಗಿ ಲ್ಯಾಪ್ರೊಸ್ಕೋಪಿ ಮತ್ತು ಎಂಡೋಸ್ಕೋಪಿ ಬಳಸಿ ವೈದ್ಯರು ಈ ದಾಖಲೆ ಸಂಖ್ಯೆಯ ಕಿಡ್ನಿ ಕಲ್ಲುಗಳನ್ನು ಹೊರತೆಗೆದಿದ್ದಾರೆ.
ಇದು ಈ ವಿಧಾನದ ಮೂಲಕ ಗರಿಷ್ಠ ಸಂಖ್ಯೆಯ ಕಿಡ್ನಿಕಲ್ಲುಗಳನ್ನು ಹೊರತೆಗೆದ ಪ್ರಕರಣ ಎನಿಸಿಕೊಂಡಿದೆ. ಈ ಶಸ್ತ್ರಚಿಕಿತ್ಸೆಗೆ ವೈದ್ಯರು ಸುಮಾರು 3 ಗಂಟೆ ಕಾಲ ತೆಗೆದುಕೊಂಡರು.
ಹುಬ್ಬಳ್ಳಿ ಮೂಲದ ರೋಗಿ ಇದೀಗ ಚೇತರಿಸಿಕೊಂಡಿದ್ದು, ತನ್ನ ದೈನಂದಿನ ಚಟುವಟಿಕೆಗಳಿಗೆ ಮರಳಿದ್ದಾರೆ ಎಂದು ಪ್ರೀತಿ ಯುರಾಲಜಿ ಆಯಂಡ್ ಕಿಡ್ನಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಹುಬ್ಬಳ್ಳಿಯ ಶಿಕ್ಷಕ ಬಸವರಾಜ ಮಡಿವಾಳರ್ ಅವರಿಗೆ ಹೊಟ್ಟೆಯ ಬಳಿ ತೀವ್ರ ನೋವು ಕಾಣಿಸಿಕೊಂಡಿತು. ಸ್ಕ್ರೀನಿಂಗ್ ನಡೆಸಿದಾಗ ಮೂತ್ರದ ಕಲ್ಲುಗಳು ರಾಶಿ ರಾಶಿಯಾಗಿ ಇದ್ದುದು ಕಂಡುಬಂತು. ಮೂತ್ರನಾಳದಲ್ಲಿ ಸಹಜ ಸ್ಥಳದಲ್ಲಿ ಇರುವ ಬದಲಾಗಿ ಮೂತ್ರಪಿಂಡ ಹೊಟ್ಟೆಯ ಸಮೀಪ ಇತ್ತು. ಇದನ್ನು ಎಕ್ಟೋಪಿಕ್ ಕಿಡ್ನಿ ಎಂದು ಕರೆಯಲಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಬಹುಶಃ ರೋಗಿಗೆ ಎರಡು ವರ್ಷಗಳಿಂದ ಇದ್ದಿರಬೇಕು. ಆದರೆ ಯಾವುದೇ ರೋಗಲಕ್ಷಣ ಇದುವರೆಗೆ ಕಾಣಿಸಿಕೊಂಡಿರಲಿಲ್ಲ. ಆದಾಗ್ಯೂ ದಿಢೀರನೇ ನೋವು ಕಾಣಿಸಿಕೊಂಡಾಗ ಎಲ್ಲ ಅಗತ್ಯ ತಪಾಸಣೆಗಳನ್ನು ನಡೆಸಲಾಯಿತು. ಅಗ ದೊಡ್ಡ ಸಂಖ್ಯೆಯ ಕಿಡ್ನಿಕಲ್ಲುಗಳ ಪತ್ತೆಯಾದವು. ಅವರ ಆರೋಗ್ಯ ಸ್ಥಿತಿಯನ್ನು ಪರಾಮರ್ಶಿಸಿ ಅವರಿಗೆ ಲ್ಯಾಪ್ರೋಸ್ಕೋಪಿ ಮತ್ತು ಎಂಡೋಸ್ಕೋಪಿ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲು ನಿರ್ಧರಿಸಲಾಯಿತು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಮೋಹನ್ ಹೇಳಿದ್ದಾರೆ.