ಮಂಗಳೂರು: ”ಪ್ರತಿಭಟನಾನಿರತ ಕಾರ್ಯಕರ್ತರನ್ನು ಚದುರಿಸುವ ಉದ್ದೇಶ ಪೊಲೀಸರಿಗೆ ಇದ್ದಂತಿರಲಿಲ್ಲ. ನಮಗೆ ಹೊಡೆದು ಅಶಾಂತಿ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಲಾಠಿ ಬೀಸಿ ಚದುರಿಸುವ ಬದಲು ತಲೆಯನ್ನೇ ಗುರಿಯಾಗಿಸಿಕೊಂಡು ಹೊಡೆದಿದ್ದಾರೆ. ಮೊಳೆ ಜೋಡಿಸಿಟ್ಟಿದ್ದ ಯಾವುದೋ ವಸ್ತುವಿನಿಂದ ಮತ್ತು ರೀಪುವಿನಿಂದಲೂ ಹಲ್ಲೆ ನಡೆಸಿದ್ದಾರೆ. ಬೂಟುಗಾಲಿನಿಂದಲೂ ತುಳಿದಿದ್ದಾರೆ. ಬ್ಯಾರಿಗಳಿಗೆ ಭಾರೀ ಅಹಂಕಾರ ಎಂದು ನಿಂದಿಸುತ್ತಿದ್ದರು. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದರು. ಪರಿಚಿತ ಪೊಲೀಸರೇ ಈ ಕೆಲಸ ಮಾಡಿದ್ದಾರೆ” ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯೆದುರು ಮಂಗಳವಾರ ನಡೆದ ಪೊಲೀಸ್ ಲಾಠಿಚಾರ್ಜ್ ವೇಳೆ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಅಳಲು ತೋಡಿಕೊಂಡಿದ್ದಾರೆ.
”ನಾನು ಧರ್ಮಸ್ಥಳದಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದು ದಾರಿಮಧ್ಯೆ ಉಪ್ಪಿನಂಗಡಿಯ ಮಸೀದಿಗೆ ಹೋಗಿದ್ದೆ. ನಮಾಝ್ ಮುಗಿಸಿ ಹೊರಗೆ ಬರುತ್ತಿದ್ದಂತೆ ಪೊಲೀಸರು ಲಾಠಿಯಿಂದ ತಲೆಗೆ ಬಲವಾಗಿ ಹೊಡೆದರು” ಎಂದು ಸುಳ್ಯದ ತಾಹಿರ್ ಅಳಲು ತೋಡಿಕೊಂಡಿದ್ದಾರೆ.
”ನಮ್ಮ ನಾಯಕರನ್ನು ಅಕ್ರಮ ಬಂಧನದಲ್ಲಿಟ್ಟ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ನಮ್ಮನ್ನು ಚದುರಿಸುವ ನೆಪದಲ್ಲಿ ಲಾಠಿಯಿಂದ ತಲೆಗೇ ಹೊಡೆದರು. ರಕ್ತ ಸುರಿಯುತ್ತಿದ್ದರೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸದೆ ಪೊಲೀಸರು ದೌರ್ಜನ್ಯ ನಡೆಸುತ್ತಲೇ ಇದ್ದರು” ಎಂದು ಫಯಾಝ್ ಎಂಬವರು ಆರೋಪಿಸಿದ್ದಾರೆ.
”ಮೀನು ವ್ಯಾಪಾರಿಯಾದ ನಾನು ನೆಕ್ಕರೆಯಲ್ಲಿರುವ ನಾದಿನಿಯ ಮನೆಗೆ ಹೊರಟಿದ್ದೆ. ಉಪ್ಪಿನಂಗಡಿ ಮಸೀದಿಗೆ ತೆರಳಿ ಬರುವಾಗ ಪೊಲೀಸರು ‘ನೀನು ಮುಸ್ಲಿಂ ಅಲ್ವಾ? ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ’ ಎಂದು ಹೇಳಿ ಹಲ್ಲೆ ನಡೆಸಿದರು”, ಎಂದು ಅಬೂಬಕರ್ ಸಿದ್ದೀಕ್ ಎಂಬವರು ದೂರಿದ್ದಾರೆ.
”ಗುಜರಿ ವ್ಯಾಪಾರಿಯಾದ ನಾನು ಉಪ್ಪಿನಂಗಡಿಗೆ ಗುಜರಿಗಾಗಿ ಹೋಗಿದ್ದೆ. ರಾತ್ರಿ ಸುಮಾರು 8:45ಕ್ಕೆ ಪೊಲೀಸರು ಲಾಠಿಯಿಂದ ಹೊಡೆಯುತ್ತಾ ಬಂದರು” ಎಂದು ಬೋಳಿಯಾರ್‌ನ ಅಶ್ರಫ್ ಎಂಬವರು ತಿಳಿಸಿದ್ದಾರೆ.
ಒಟ್ಟಾರೆ ಪೊಲೀಸರ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸಮಗ್ರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೇಕಿದೆ.