ಬೆಳಗಾವಿ: ಕರ್ನಾಟಕದ ಕರಾವಳಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಕರಾವಳಿಯಲ್ಲಿ ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಅಗತ್ಯ ಎಂದು ರಾಜ್ಯ ಸರ್ಕಾರ ಹೇಳಿದೆ.
ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್, ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಂಭವಿಸಿದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದ ಅವರು, ‘ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ, ಕೋಮುಸೌಹಾರ್ದತೆ ಕಾಪಾಡುವುದು ನಮ್ಮ ಪಾಲಿಗೆ ಮುಖ್ಯ.
ಕರಾವಳಿಯಲ್ಲಿ ಶಾಂತಿಯನ್ನು ಕಾಪಾಡಲು ಎಲ್ಲ ಧರ್ಮೀಯರು ಸರ್ಕಾರಕ್ಕೆ ಸಹಕಾರ ನೀಡಬೇಕು. ಯು.ಟಿ.ಖಾದರ್ ಅವರಿಗೆ ಯಾವುದೆ ಆತಂಕ ಬೇಡ. ಯಾವುದಾದರೂ ನಿರ್ದಿಷ್ಟ ಪ್ರಕರಣ ಇದ್ದರೆ ನನ್ನ ಅಥವಾ ಮುಖ್ಯಮಂತ್ರಿಯ ಗಮನಕ್ಕೆ ತಂದರೆ ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕರಾವಳಿಯಲ್ಲಿ ಶಾಂತಿಯನ್ನು ಕಾಪಾಡಲು ಎಲ್ಲ ಧರ್ಮೀಯರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಕರಾವಳಿ ಜಿಲ್ಲೆಯ ಕೆಲವು ಘಟನಾವಳಿಗಳ ಬಗ್ಗೆ ಖಾದರ್ ಪ್ರಸ್ತಾಪಿಸಿದ್ದಾರೆ. ಸಣ್ಣಪುಟ್ಟ ಘಟನೆಗಳು ಆದಾಗ ಪೊಲೀಸರು ಗಂಭೀರ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮದ ಪ್ರಶ್ನೆಯಿಲ್ಲ. ಶಾಂತಿ ಸುವ್ಯವಸ್ಥೆಗೆ ಭಂಗ ಬರಬಾರದು ಎಂಬುದು ಸರ್ಕಾರದ ಉದ್ದೇಶ. ಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆಯೆ ಹಲ್ಲೆಯಾಗಿದೆ. 300-400 ಜನ ಸೇರಿ ಪೊಲೀಸರ ಮೇಲೆ ಹಲ್ಲೆ ಮಾಡಿ, ಚೂರಿ ಹಾಕಿದ್ದಾರೆ. ಅಂತಹ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳಲೇಬೇಕು. ಈ ಘಟನೆ ಕುರಿತು ವರದಿ ತರಿಸುತ್ತಿದ್ದೇನೆ. ಕರಾವಳಿ ಶಾಂತಿ ಕಾಪಾಡಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದರು.