ನಾಲ್ಕು ತಾಲೂಕುಗಳಲ್ಲಿ ನಿಷೇದಾಜ್ಞೆ ಜಾರಿ:
ಪುತ್ತೂರು ಉಪ ವಿಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಸೆಕ್ಷನ್ 144ರನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಪುತ್ತೂರು ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲರವರು ಆದೇಶ ಹೊರಡಿಸಿದ್ದಾರೆ. ಪುತ್ತೂರು,ಬೆಳ್ತಂಗಡಿ,ಸುಳ್ಯ,ಕಡಬ ತಾಲೂಕಿನಾದ್ಯಂತ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ.
ಉಪ್ಪಿನಂಗಡಿಯಲ್ಲಿ ಡಿ 14 ರಂದು ರಾತ್ರಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುತ್ತೂರು ಉಪವಿಭಾಗಾಯಾದ್ಯಂತ ಅಂದರೆ ಪುತ್ತೂರು,ಬೆಳ್ತಂಗಡಿ,ಸುಳ್ಯ,ಕಡಬ ತಾಲೂಕಿನಾದ್ಯಂತ ಡಿ.15 ರಿಂದ ಡಿ.17ರ ಮಧ್ಯರಾತ್ರಿ 12:00 ಗಂಟೆಯವರೆಗೆ ನಿಷೇದಾಜ್ಞೆಯನ್ನು ವಿಧಿಸಿ ಆದೇಶಿಸಲಾಗಿದೆ ಎಂದು ಸಹಾಯಕ ಆಯುಕ್ತರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಏನಾಗಿತ್ತು? ಇಲ್ಲಿದೆ ಸಂಪೂರ್ಣ ವಿವರ
ಉಪ್ಪಿನಂಗಡಿ ಠಾಣೆಯ ಮುಂಭಾಗದಲ್ಲಿ ಪಿಎಫ್‌ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನೆಪದಲ್ಲಿ ಹೈಡ್ರಾಮಾ ನಡೆಸಿ ಬಳಿಕ ಪೊಲೀಸರು ಲಾಠಿ ಪ್ರಯೋಗ ಮಾಡಿದ್ದು, ಸದ್ಯ ಉಪ್ಪಿನಂಗಡಿ ಬೂದಿ ಮುಚ್ಚಿದ ಕೆಂಡದಂತಿದೆ. ಉಪ್ಪಿನಂಗಡಿ ಸುತ್ತಾಮುತ್ತ ಸೆಕ್ಷನ್ 144 ಜಾರಿಯಾಗಿದೆ.
ಹಲ್ಲೆಕೋರರ ಬಂಧನ ಖಂಡಿಸಿ ಠಾಣೆ ಮುತ್ತಿಗೆ ಯತ್ನ:
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಠಾಣಾ ವ್ಯಾಪ್ತಿಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಡಿಸೆಂಬರ್ 6ರಂದು ನಡೆದ ಯುವಕರಿಬ್ಬರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ಮೂವರನ್ನು ವಶಕ್ಕೆ ಪಡೆದಿದ್ದರು. ಇದನ್ನು ವಿರೋಧಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸಂಜೆಯಾದರೂ ಪ್ರತಿಭಟನಾ ಧರಣಿ ನಡೆಯುತ್ತಲೇ ಇತ್ತು. ಈ ವೇಳೆ ಮತ್ತೊಂದು ಗುಂಪು ಕೂಡ ಠಾಣೆ ಮುಂದೆ ಜಮಾಯಿಸಿತ್ತು.
ಕತ್ತಲಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆಯಿತು. ಪೊಲೀಸರು ಎಷ್ಟು ಮನವಿ ಮಾಡಿಕೊಂಡರೂ ಪ್ರತಿಭಟನಕಾರರು ಜಾಗ ಬಿಟ್ಟು ಕದಲಲಿಲ್ಲ ಕತ್ತಲಾದ್ರೂ ಪ್ರತಿಭಟನಾ ಧರಣಿ ಮುಂದುವರಿದಿತ್ತು. ಸ್ಥಳೀಯ ಮಾಹಿತಿ ಪ್ರಕಾರ ಎರಡು ಸಾವಿರಕ್ಕೂ ಹೆಚ್ಚು ಮಂದಿ ಠಾಣೆ ಬಳಿ ಜಮಾಯಿಸಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆಯಿತು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ಈ ವೇಳೆ ವಿವಿಧ ಸಂಘಟನೆಗಳ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.
ಗಲಭೆಗೆ ಸಂಬಂಧಿಸಿದಂತೆ ಬಂದೋಬಸ್ತ್‌ಗೆ ತೆರಳಿದ್ದ ಬಂಟ್ವಾಳ ನಗರ ಠಾಣೆ ಎಸ್‌ಐ ಪ್ರಸನ್ನಗೆ ದುಷ್ಕರ್ಮಿಗಳು ಚೂರಿ ಇರಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಐ ಉಮೇಶ್, ಮಹಿಳಾ ಎಸ್‌ಐ ಸೇರಿದಂತೆ ಹಲವು ಪೊಲೀಸರು ಕಲ್ಲಿನೇಟಿನಿಂದಾಗಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಪ್ರತಿಭಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸದ್ಯ ಪುತ್ತೂರು ಉಪವಿಭಾಗದ ನಾಲ್ಕೂ ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಮತ್ತೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚೆರಿಕಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.