ಬೆಂಗಳೂರು : ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ಡಿ.10ರಂದು ಮತದಾನ ನಡೆದಿದ್ದು ಮತ ಎಣಿಕೆ ಕಾರ್ಯ ಇಂದು(ಡಿ.14) ನಡೆಯಲಿದೆ.
ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ವಿಧಾನಪರಿಷತ್ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದ್ದು, ರಾಜ್ಯದ 20 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.
ವಿಧಾನಪರಿಷತ್ ನಲ್ಲಿ ಸ್ಪಷ್ಟ ಬಹುಮತ ಪಡೆಯಲು ಬಿಜೆಪಿ 12 ಸ್ಥಾನಗಳನ್ನು ಗೆಲ್ಲಬೇಕಿದೆ. ಪ್ರಸ್ತುತ ಬಿಜೆಪಿಯ 32, ಕಾಂಗ್ರೆಸ್ ನ 29, ಜೆಡಿಎಸ್ ನ 12, ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. 2022 ರ ಜನವರಿ 5 ಕ್ಕೆ ವಿಧಾನಪರಿಷತ್ ಸದಸ್ಯರ ಪೈಕಿ ಬಿಜೆಪಿ ಯಿಂದ 66, ಕಾಂಗ್ರೆಸ್ ನಿಂದ 14, ಜೆಡಿಎಸ್ ನಿಂದ 4 ಸ್ವತಂತ್ರ 1 ಸ್ಥಾನಗಳು ತೆರವಾಗಲಿವೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಮಂಡ್ಯ ಕ್ಷೇತ್ರದಲ್ಲಿನ 25 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ವಿಧಾನಪರಿಷತ್ ನ 25 ಸ್ಥಾನಗಳ ಪೈಕಿ ಕಾಂಗ್ರೆಸ್ ನಿಂದ 20, ಬಿಜೆಪಿಯಿಂದ 20 ಹಾಗೂ ಜೆಡಿಎಸ್ ನಿಂದ 6 ಸೇರಿದಂತೆ 90 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.