ಬೆಂಗಳೂರು: ‘ಸಹೋದ್ಯೋಗಿ ಯುವತಿ ಜೊತೆ ಸಲುಗೆ ಬೆಳೆಸಿದ್ದ ಪತಿಯು, ಆ ಯುವತಿ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾರೆ’ ಎಂದು ಮಹಿಳೆಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವತಿ ಸಹ ದೂರು ಕೊಟ್ಟಿದ್ದಾರೆ.
‘ಕೌಟುಂಬಿಕ ಹಾಗೂ ಅಕ್ರಮ ಸಂಬಂಧದ ವಿಚಾರವಾಗಿ ರಾಜಭವನ ರಸ್ತೆಯಲ್ಲಿ ಮಹಿಳೆ, ಆಕೆಯ ಪತಿ ಹಾಗೂ ಯುವತಿ ನಡುವೆ ಡಿ. 6ರಂದು ರಾತ್ರಿ ಗಲಾಟೆ ನಡೆದಿದೆ. ಈ ಬಗ್ಗೆ ಎರಡು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎರಡೂ ಕಡೆಯ ದೂರುದಾರರಿಂದ ಹೇಳಿಕೆ ಪಡೆಯಲಾಗಿದೆ. ಸ್ಥಳದಲ್ಲಿ ಏನಾಯಿತು ಹಾಗೂ ಗಲಾಟೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮದುವೆಯಾದ ಆರಂಭದಲ್ಲಿ ನನ್ನ ಜೊತೆ ಚೆನ್ನಾಗಿದ್ದ ಪತಿ, ಇತ್ತೀಚೆಗೆ ವಿನಾಕಾರಣ ಜಗಳ ಮಾಡಲಾರಂಭಿಸಿದ್ದರು. ನನ್ನಿಂದ ದೂರವಾಗಲು ಇಚ್ಛಿಸುತ್ತಿದ್ದರು. ಅವರ ನಡೆಯಿಂದ ಅನುಮಾನ ಬಂದಿತ್ತು. ಸ್ನೇಹಿತರನ್ನು ವಿಚಾರಿಸಿದಾಗ, ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿ ಯುವತಿ ಜೊತೆ ಸಲುಗೆ ಇರುವುದು ತಿಳಿಯಿತು’ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾರೆ.
‘ಡಿ. 6ರಂದು ಸಂಜೆ ಯುವತಿ ಹಾಗೂ ನಾಲ್ವರು ಸ್ನೇಹಿತರ ಜೊತೆಯಲ್ಲಿ ಪತಿ ಹಲಸೂರು ಬಳಿಯ ಹೋಟೆಲ್‌ಗೆ ಹೋಗಿ ಪಾರ್ಟಿ ಮಾಡಿದ್ದರು. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಗ್ರಾಹಕರ ರೀತಿಯಲ್ಲಿ ಹೋಟೆಲ್‌ಗೆ ಹೋಗಿ ಮರೆಯಲ್ಲಿ ನಿಂತು ಗಮನಿಸಿದ್ದೆ. ಮದ್ಯದ ಅಮಲಿನಲ್ಲಿದ್ದ ಎಲ್ಲರೂ ಹೋಟೆಲ್‌ನಿಂದ ರಾತ್ರಿ ಕಾರಿನಲ್ಲಿ ಹೊರಟಿದ್ದರು. ಅವರನ್ನು ನಾನೂ ಕಾರಿನಲ್ಲಿ ಹಿಂಬಾಲಿಸಿದ್ದೆ.’
‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣ ಬಳಿ ನಾಲ್ವರು ಸ್ನೇಹಿತರನ್ನು ಪತಿ ಕಾರಿನಿಂದ ಇಳಿಸಿದ್ದರು. ನಂತರ, ಯುವತಿಯೊಬ್ಬರನ್ನೇ ಕಾರಿನ ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ರಾಜಭವನ ರಸ್ತೆಯತ್ತ ಹೊರಟಿದ್ದರು. ಮಾರ್ಗಮಧ್ಯೆಯೇ ರಸ್ತೆ ಬದಿ ಕಾರು ನಿಲ್ಲಿಸಿದ್ದ ಅವರಿಬ್ಬರು, ಪರಸ್ಪರ ಆಲಂಗಿಸಿಕೊಂಡು ಚುಂಬಿಸುತ್ತ ಲೈಂಗಿಕ ಕ್ರಿಯೆ ನಡೆಸಲಾರಂಭಿಸಿದ್ದರು. ನಾನು ಹೋಗಿ ಕಾರಿನ ಬಳಿ ನಿಲ್ಲುತ್ತಿದ್ದಂತೆ ಇಬ್ಬರೂ ಗಾಬರಿಯಿಂದ ವಾಹನದಿಂದ ಕೆಳಗೆ ಇಳಿದರು’ ಎಂದೂ ದೂರಿನಲ್ಲಿ ಹೇಳಿದ್ದಾರೆ.
ಘಟನೆ ಕುರಿತಂತೆ ವ್ಯವಸ್ಥಾಪಕರ ಪತ್ನಿ ವಿರುದ್ಧ ಯುವತಿ ಸಹ ಪ್ರತಿ ದೂರು ನೀಡಿದ್ದಾಳೆ.