ಬೆಂಗಳೂರು : ಕಳೆದ ಎರಡು ವರ್ಷಗಳಿಂದಲೂ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯೇ ಅತಂತ್ರವಾಗಿದೆ. ಕೊರೊನಾ ವೈರಸ್ ಸೋಂಕಿನ ಭಯದಲ್ಲಿ ಕಳೆದ ವರ್ಷ ಪರೀಕ್ಷೆಯೇ ನಡೆದಿರಲಿಲ್ಲ. ಆದರೆ ಕೊರೊನಾ ಇಳಿಕೆಯಾಗಿ ಶೈಕ್ಷಣಿಕ ಚಟುವಟಿಕೆ ಸುಸೂತ್ರವಾಗಿ ನಡೆಯುವ ಹೊತ್ತಲ್ಲೇ ಕೊರೊನಾ ಜೊತೆಗೆ ಓಮಿಕ್ರಾನ್ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯೂ ರದ್ದಾಗುತ್ತಾ ಎಂಬ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಧ್ಯವಾರ್ಷಿಕ ಪರೀಕ್ಷೆಯ ಅಂಕವೇ ವಿದ್ಯಾರ್ಥಿಗಳಿಗೆ ನಿರ್ಣಾಯಕವಾಗುವ ಸಾಧ್ಯತೆ ಇದೆ.
ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಬಂದ್ ಆಗಿತ್ತು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ನಡೆಸಲು ಶಿಕ್ಷಣ ಇಲಾಖೆಯಿಂದ ಸಾಧ್ಯವಾಗಿರಲ್ಲ. ಹೀಗಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳನ್ನೇ ಪರಿಗಣಿಸಿ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಆದರೆ ಕಳೆದ ಬಾರಿ ಪ್ರಥಮ ಪಿಯುಸಿ ಪರೀಕ್ಷೆಗಳು ನಡೆದಿಲ್ಲ. ಈಗಾಗಲೇ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಧಾರವಾಡ, ಬೆಂಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿನ ವಸತಿ ಶಾಲೆಗಳಲ್ಲಿ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದೆ.
ಬಹುತೇಕ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಯಾವುದೇ ಲಕ್ಷಣಗಳನ್ನೂ ತೋರಿಸುತ್ತಿಲ್ಲ. ಇನ್ನು ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಮಾತ್ರವೇ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಮ್ಮೆ ಎಲ್ಲಾ ವಿದ್ಯಾರ್ಥಿಗಳನ್ನು, ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಸಾಧ್ಯತೆಯಿದೆ. ರಾಜ್ಯಕ್ಕೆ ಓಮಿಕ್ರಾನ್ ಪ್ರಬೇಧ ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರಕಾರ ನಿತ್ಯವೂ ಒಂದು ಲಕ್ಷ ಕೊರೊನಾ ಟೆಸ್ಟಿಂಗ್ ನಡೆಸುವಂತೆ ಆರೋಗ್ಯ ಇಲಾಖೆಗೆ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ನೆರೆಯ ರಾಜ್ಯಗಳ ವಿದ್ಯಾರ್ಥಿಗಳ ಮೇಲೆ ಎಷ್ಟೇ ನಿಗಾ ಇರಿಸಿದರೂ ಕೂಡ ಕೇರಳ ವಿದ್ಯಾರ್ಥಿಗಳಿಂದಲೇ ರಾಜ್ಯದಲ್ಲಿ ಸೋಂಕು ವ್ಯಾಪಿಸುತ್ತಿದೆ. ಸೋಂಕಿನ ಪ್ರಮಾಣ ಏರಿಕೆಯಾದರೆ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗುವುದು ಪಕ್ಕಾ.
ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆಯನ್ನು ನೀಡಿದೆ. ಇನ್ನು ರಾಜ್ಯದಲ್ಲಿ ಕೇವಲ ಇಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದ್ದರೂ ಕೂಡ ಓಮಿಕ್ರಾನ್ ಸೋಂಕಿತರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ವರದಿ ಇನ್ನಷ್ಟೆ ಹೊರಬರಬೇಕಾಗಿದೆ. ಹೀಗಾಗಿ ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಆವರಿಸಿದೆ.
ಒಂದೊಮ್ಮೆ ರಾಜ್ಯದಲ್ಲಿ ಓಮಿಕ್ರಾನ್ ಹಾಗೂ ಕೊರೊನಾ ವೈರಸ್ ಸೋಂಕು ಹೆಚ್ಚಳವಾದ್ರೆ ಈ ಬಾರಿಯೂ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಡೆಯೋದು ಅನುಮಾನ. ಇದೇ ಕಾರಣಕ್ಕೇ ರಾಜ್ಯ ಸರಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಾಗಲೇ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಳೆದ ಬಾರಿ ಉಂಟಾದ ಗೊಂದಲ ಪರಿಹಾರಕ್ಕಾಗಿ ಈ ಬಾರಿ ಮಧ್ಯ ವಾರ್ಷಿಕ ಪರೀಕ್ಷೆಯನ್ನು ರಾಜ್ಯದಾದ್ಯಂತ ಏಕ ಕಾಲದಲ್ಲಿ ನಡೆಸಲು ಮುಂದಾಗಿದೆ. ಇದಕ್ಕೆ ಬೇಕಾದ ಸಿದ್ದತೆಗಳನ್ನು ನಡೆಸುವ ಸಲುವಾಗಿಯೇ ಈ ಹಿಂದೆ ನವೆಂಬರ್ 29 ರಿಂದ ಡಿಸೆಂಬರ್ 10ರ ವರೆಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ಇದೀಗ ಡಿಸೆಂಬರ್ 9 ರಿಂದ ಡಿಸೆಂಬರ್ 23ಕ್ಕೆ ಮುಂದೂಡಿಕೆಯನ್ನು ಮಾಡಲಾಗಿದೆ. ಅಲ್ಲದೇ ಮಧ್ಯ ವಾರ್ಷಿಕ ಪರೀಕ್ಷೆಯನ್ನು ಅಂತಿಮ ಪರೀಕ್ಷೆಯ ರೀತಿಯಲ್ಲಿಯೇ ನಡೆಸಲಾಗುತ್ತದೆ. ಒಂದೊಮ್ಮೆ ಅಂತಿಮ ಪರೀಕ್ಷೆ ನಡೆಸಲು ಅಸಾಧ್ಯವಾದರೆ ಮಧ್ಯವಾರ್ಷಿಕ ಪರೀಕ್ಷೆಯ ಅಂಕವೇ ಅಂತಿಮವಾಗುವ ಸಾಧ್ಯತೆಯಿದೆ.
ರಾಜ್ಯ ಸರಕಾರ ಶೈಕ್ಷಣಿಕ ಚಟುವಟಿಕೆ ಆರಂಭದ ಹೊತ್ತಲೇ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ಸೂಚನೆಯನ್ನು ನೀಡಿತ್ತು. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜನವರಿ ತಿಂಗಳಿನಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಸ್ಪೋಟವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಓಮಿಕ್ರಾನ್ ತಡೆಗೆ ಕಟ್ಟುನಿಟ್ಟಿನ ಕ್ರಮದ ಜಾರಿಯ ಅಗತ್ಯವಿದೆ ಅನ್ನೋ ಅಭಿಪ್ರಾಯವೂ ವ್ಯಕ್ಯವಾಗುತ್ತಿದೆ. ರಾಜ್ಯ ಸರಕಾರ ಈಗಾಗಲೇ ತುರ್ತು ಕ್ರಮಗಳನ್ನು ಕೈಗೊಂಡು ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆಯ ನಂತರ ಇನ್ನಷ್ಟು ಬಿಗಿ ಕ್ರಮ ಜಾರಿಯಾಗುವ ಸಾಧ್ಯತೆಯೂ ಇದೆ. ಈ ಎಲ್ಲಾ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಮಧ್ಯ ವಾರ್ಷಿಕ ಪರೀಕ್ಷೆಯ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ.
ಈ ಬಾರಿ ಮಧ್ಯ ವಾರ್ಷಿಕ ಪರೀಕ್ಷೆಯ ಅಂಕವನ್ನೇ ಅಂತಿಮ ಗೊಳಿಸುವ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯಾಗಲಿ, ಸಚಿವರಾಗಲಿ ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಆದರೆ ಕೋವಿಡ್ ವೈರಸ್ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿಯೇ ಇಲಾಖೆ ಪರೀಕ್ಷೆಯನ್ನು ರಾಜ್ಯದಾದ್ಯಂತ ಏಕ ಕಾಲದಲ್ಲಿ ನಡೆಸಲು ಮುಂದಾಗಿದೆ. ಅಲ್ಲದೇ ಮೌಲ್ಯ ಮಾಪನವನ್ನೂ ಕೂಡ ಪಾರದರ್ಶಕವಾಗಿ ನಡೆಸುವ ಚಿಂತನೆಯನ್ನೂ ನಡೆಸುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದು ಅಂತಿಮ ಪರೀಕ್ಷೆಯೇ ಆಗಬಹುದು ಎಂಬ ಮಾತು ಶೈಕ್ಷಣಿಕ ವಲಯದಲ್ಲಿ ಕೇಳಿ ಬರುತ್ತಿದೆ.