ಕಲಬುರಗಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಾಯ್ತಿ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ. ದಿ.ರಾಜೀವ್‍ಗಾಂಧಿ ಅವರು ಪಂಚಾಯ್ತಿ ವ್ಯವಸ್ಥೆಯಲ್ಲಿ ಮೀಸಲಾತಿ ಜಾರಿಗೆ ತಂದರು. ಆದರೆ ಸಂವಿಧಾನದಲ್ಲಿ ಮೀಸಲಾತಿ ತಿದ್ದುಪಡಿ ಪ್ರಶ್ನಿಸಿ ಬಿಜೆಪಿ ಕೋರ್ಟ್ ಮೊರೆ ಹೋಗಿತ್ತು. ಬಿಜೆಪಿ ಅವರಿಗೆ ಮೀಸಲಾತಿ ಬಗ್ಗೆ ಆಸಕ್ತಿ ಇಲ್ಲ, ರಾಮಜೋಯಿಸ್ ರಿಟ್ ಪಿಟಿಷನ್ ಹಾಕಿದ್ದರು. ಬಿಜೆಪಿ ಬಂದ ಮೇಲೆ ಪಂಚಾಯತ್ ರಾಜ್ಯ ವ್ಯವಸ್ಥೆ ಬಿಜೆಪಿಯಿಂದ ಕೈತಪ್ಪಿದೆ ಎಂದು ಕಿಡಿಕಾರಿದರು.
ಸರ್ಕಾರ ಪಂಚಾಯ್ತಿ ಎಲೆಕ್ಷನ್ ಪ್ರತಿ ಐದು ವರ್ಷಕ್ಕೊಮ್ಮೆ ಕಡ್ಡಾಯವಾಗಿ ನಡೆಸಬೇಕು. ಚುನಾವಣೆ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕ್ಷೇತ್ರಗಳ ಪುನರ್ ವಿಂಗಡನೆ ಮಾಡಲು ಸರ್ಕಾರ ಮುಂದಾಗಿದ್ದು, ಚುನಾವಣೆ ಮುಂದೂಡಲು ಹುನ್ನಾರ ನಡೆಸಿದೆ. ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮುಂದೂಡಲು ಸರ್ಕಾರ ಪ್ಲಾನ್ ಮಾಡಿದೆ. ಆದರೆ ಹೈಕೋರ್ಟ್ ತೀರ್ಪಿನ ಅನ್ವಯ ಚುನಾವಣೆ ನಡೆಯಬೇಕು ಎಂದು ಆಗ್ರಹಿಸಿದರು.
ಪಂಚಾಯ್ತಿ ವ್ಯವಸ್ಥೆಯನ್ನು ಆರ್ಥಿಕವಾಗಿ ಬಲಹೀನ ಮಾಡಲಾಗ್ತಿದೆ. 15ನೇ ಹಣಕಾಸು ವ್ಯವಸ್ಥೆಯಲ್ಲಿ ಜನರ ಕನಸು ನನಸಾಗುತ್ತಿಲ್ಲ. ಪ್ರಧಾನಿ ಮೋದಿ ಅವರ ಕನಸು ನನಸಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯನ್ನ ಹಳ್ಳ ಹಿಡಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಕೊರೊನಾ ಸಂದರ್ಭದಲ್ಲಿ ಜೀವನ ಕಳೆದುಕೊಂಡ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಶ್ರೀರಕ್ಷೆಯಾಗಿತ್ತು ಎಂದು ತಿಳಿಸಿದರು.
ಕೆಲಸ ಮಾಡಿದರೂ ಸಹ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಕಲಬುರಗಿ ನಗರವನ್ನ ಸ್ಮಾರ್ಟ್ ಸಿಟಿಯನ್ನಾಗಿ ಮಾಡುವುದಾಗಿ ಜಿಲ್ಲೆ ನಾಯಕರು ಹೇಳಿದ್ದಾರೆ. ಇರೋ ನಗರವನ್ನ ಸರಿಯಾಗಿ ಕಾಪಾಡಲು ಇವರಿಗೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಸಾಧನೆ ಕೇವಲ ಪತ್ರಿಕೆಗಳಲ್ಲಿ ಮಾತ್ರ. ಜಿಲ್ಲೆಗೆ ಇದುವರೆಗೆ ಒಂದು ಉಸ್ತುವಾರಿ ಸಚಿವ ಸ್ಥಾನ ಸರ್ಕಾರ ನೀಡಿಲ್ಲ. ಬಿಜೆಪಿ ಏನೇ ಕುತಂತ್ರ ನಡೆಸಿದ್ರು ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಅಧಿಕಾರವಧಿಯಲ್ಲಿ ಏನೇನು ಕೆಲಸ ಮಾಡಿಲ್ಲ. ನಮ್ಮ ಅಭ್ಯರ್ಥಿ ಪಂಚಾಯ್ತಿ ರಾಜ್ ವ್ಯವಸ್ಥೆಯಿಂದ ಬಂದವರು, ಬಿಜೆಪಿ ಅಭ್ಯರ್ಥಿ ವ್ಯಾಪಾರದ ಹಿನ್ನೆಲೆಯಿಂದ ಬಂದವರು. ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಅರಿವಿಲ್ಲ ಎಂದು ಆರೋಪಿಸಿದರು.