ಬೆಂಗಳೂರು: ‘ಪೊಲೀಸರು ಕೆಟ್ಟು ಹಾಳಾಗಿದ್ದಾರೆ. ಎಂಜಲು ಕಾಸು ತಿನ್ನುತ್ತಾರೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ವೈರಲ್ ಆಗಿದೆ. ಇದೇ ರೀತಿ ಪೊಲೀಸರಿಂದ ಎಂಜಲು ಕಾಸು ತಿನ್ನುವವರ ಕುರಿತೂ ಗೃಹಸಚಿವರು ಮಾತನಾಡಬೇಕು’ ಎಂದು ಆಡಳಿತಾರೂಢ ಬಿಜೆಪಿ ಮುಖಂಡರೂ ಆಗಿರುವ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣವರ್ ಆಗ್ರಹಿಸಿದ್ದಾರೆ.
ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಬಳಿಕ ಪೊಲೀಸರ ಕುರಿತು ಇಂತಹ ಹೇಳಿಕೆಗಳು ಬರುತ್ತಲೇ ಇವೆ. ಆದರೆ, ವರ್ಗಾವಣೆ ಎಂಜಲು ದಂಧೆ ಗೃಹ ಸಚಿವರಿಗೆ ಗೊತ್ತಿಲವೇ ಎಂದು ಪ್ರಶ್ನಿಸಿರುವ ಅವರು, ಬೆಂಗಳೂರಿನ ಉಪ್ಪಾರಪೇಟೆ, ಚಿಕ್ಕಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಕೆಲ ಪ್ರಮುಖ ಠಾಣೆಗಳಿಗೆ ವರ್ಗವಾಗಿ ಬರುವ ಠಾಣಾಧಿಕಾರಿಗಳು 50 ಲಕ್ಷದವರೆಗೂ ಎಂಜಲು ನೀಡಬೇಕು. ರಾಜ್ಯದ ಯಾವುದೇ ಠಾಣೆಗೆ ಪೋಸ್ಟಿಂಗ್ ಬರುವ ಅಧಿಕಾರಿ ಕನಿಷ್ಠ 25 ಲಕ್ಷ ಎಂಜಲು ನೀಡಲೇಬೇಕು. ಪೊಲೀಸ್ ಪೇದೆಯಿಂದ ಐಪಿಎಸ್ ಅಧಿಕಾರಿ ವರ್ಗಾವಣೆವರೆಗೂ ಪ್ರತಿ ಹಂತದಲ್ಲಿಯೂ ಎಂಜಲು ಕೊಡುವುದು ಸಾಮಾನ್ಯವಾಗಿದೆ. ಶಾಸಕರು ಬೇಡ ಎಂದರೆ, ಸಚಿವರಿಗೆ, ಸಚಿವರು ಬೇಡವೆಂದರೆ, ಶಾಸಕರಿಗೆ ಈ ಇಬ್ಬರೂ ಬೇಡವೆಂದರೆ ಕೇಂದ್ರ ಕಚೇರಿಗೆ ಎಂಜಲು ಕಾಸು ಕೊಡಲೇಬೇಕಾದ ಸ್ಥಿತಿಯಿದೆ ಎಂದು ಆರೋಪಿಸಿದ್ದಾರೆ.
ಸಚಿವರ ವಿರುದ್ದ ದೂರು ದಾಖಲು
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಗೃಹಸಚಿವರ ಸಚಿವರ ವಿರುದ್ಧ ದೂರು ದಾಖಲಾಗಿದೆ. ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ನವೀನ್ ಕುರುವಾನೆ ದೂರು ದಾಖಲು ಮಾಡಿದ್ದಾರೆ. ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿಕರಿಗೆ ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಮಾಜದ ಶಾಂತಿ, ಮಕ್ಕಳು, ಮಹಿಳೆಯರ ರಕ್ಷಣೆಯಲ್ಲಿ ಪೊಲೀಸರದ್ದು ಪ್ರಮುಖ ಪಾತ್ರವಾಗಿದ್ದು ಹಗಲಿರುಳೆನ್ನದೆ ಪೊಲೀಸರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅಂತಹ ಪೊಲೀಸರನ್ನ ನಾಯಿಗೆ ಹೋಲಿಸಿರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.