ಮಂಗಳೂರು: ನಗರದ ಎರಡು ಕಡೆ ವಿದ್ಯಾರ್ಥಿಗಳ ನಡುವೆ ತೀವ್ರ ಗಲಾಟೆ ನಡೆದಿದ್ದು ಬಿಡಿಸಲು ಹೋದ ಐವರು ಪೊಲೀಸರಿಗೂ ಕಲ್ಲು, ಇಂಟರ್ ಲಾಕ್ ಎಸೆದು ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಯೇನಪೋಯ ಡಿಗ್ರಿ ಕಾಲೇಜಿನಲ್ಲಿ 3ನೇ ವರ್ಷದ ಬಿಎಸ್ಪಿ ಹಾಸ್ಪಿಟಾಲಿಟಿ ಓದುತ್ತಿರುವ ಕೇರಳ ಮೂಲದ ಆದರ್ಶ ಪ್ರೇಮಕುಮಾರ್ ಎಂಬಾತ ಗುರುವಾರ ಸಂಜೆ ಏಳು ಗಂಟೆ ಸುಮಾರಿಗೆ ಬಾವುಟ ಗುಡ್ಡೆಯ ಲೈಟ್ ಹೌಸ್ ಹಿಲ್ ಅಪಾರ್ಟ್ಮೆಂಟ್ ಬಳಿ ಬಂದಿದ್ದು ಅಲ್ಲಿ ತನ್ನ ಸ್ನೇಹಿತೆ ಸಿನಾನ್ ಜೊತೆ ಮಾತನಾಡುತ್ತಿದ್ದಾಗ ಎಂಟು ಜನರ ತಂಡ ಆದರ್ಶ್ ಮೇಲೆ ಹಲ್ಲೆ ನಡೆಸಿದೆ. ಇಂಟರ್ ಲಾಕ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡ ಆದರ್ಶ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಬಗ್ಗೆ ಆದರ್ಶ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಇವರ ಜಗಳ ಬಿಡಿಸಲು ಬಂದಿದ್ದ ಆದರ್ಶ್ ಸ್ನೇಹಿತರಾದ ಶ್ರವಣ್ ಮತ್ತು ಶೆನಿನ್ ಬಂದಿದ್ದು ಅವರಿಗೂ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಇವರ ಗಲಾಟೆಯಲ್ಲಿ ಎದುರಾಳಿ ತಂಡದ ಮಹಮ್ಮದ್ ಶರೀಫ್ ಎಂಬವನ ಮೇಲೂ ಹಲ್ಲೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿ ಎರಡೂ ತಂಡಕ್ಕೆ ಸೇರಿದ ಆದಿತ್ಯ, ಕೆನ್ ಜಾನ್ಸನ್, ಅಬ್ದುಲ್ ಶಾಹಿದ್, ಮೊಹಮ್ಮದ್, ವಿಮಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬಳಿಕ ದೂರುದಾರ ಆದರ್ಶ್, ತನ್ನ ಸ್ನೇಹಿತರಾದ ಗುಜ್ಜರಕೆರೆ ಬಳಿಯ ಹಾಸ್ಟೆಲ್ ನಲ್ಲಿ ನಿವಾಸಿಗಳಾಗಿರುವ ಶ್ರವಣ್ ಮತ್ತು ಶೆನಿನ್ ಜೀವಕ್ಕೆ ಅಪಾಯ ಇದ್ದು ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿದ್ದು ಅದರಂತೆ ಪೊಲೀಸರು ಅಲ್ಲಿಗೆ ತೆರಳಿದಾಗ ಅಲ್ಲಿದ್ದ ವಿದ್ಯಾರ್ಥಿಗಳ ತಂಡ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪಾಂಡೇಶ್ವರ ಪಿಎಸ್ಐ ಶೀತಲ್ ಮತ್ತವರ ತಂಡ ಸ್ಥಳಕ್ಕೆ ತೆರಳಿದ್ದಾಗ ಇಂಟರ್ ಲಾಕ್, ಕಲ್ಲು , ಕುರ್ಚಿಗಳನ್ನು ಎಸೆದು ಪೊಲೀಸರಿಗೆ ಹಲ್ಲೆ ನಡೆಸಿದ್ದಾರೆ. ಐದು ಜನ ಪೊಲೀಸರು ಗಾಯಗೊಂಡಿದ್ದಾರೆ.
ಈ ಬಗ್ಗೆ ಸಿನಾನ್ ಎಂಬಾತ ಪ್ರತಿ ದೂರು ನೀಡಿದ್ದು ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ಫಹಾದ್, ಅಬು ತಹರ್, ಮೊಹಮ್ಮದ್ ನಾಸಿಫ್, ಆದರ್ಶ ಎಂಬವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಇಸ್ಮಾಯಿಲ್, ಇಸ್ಮಾಯಿಲ್ ಅನ್ಸರ್, ಗಫೂರ್, ತಮಮ್, ಸಿನಾನ್ ಎಂಬವರು ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.