ಬಂಟ್ವಾಳ: ಕ್ರಿಕೆಟ್ ಆಡವಾಡಲೆಂದು ತೆರಳಿ ವಾಪಾಸ್ ಮನೆಗೆ ಬರದೆ ನಾಪತ್ತೆಯಾಗಿದ್ದಾನೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಯುವಕನ ವಿರುದ್ಧ ಉದ್ಯೋಗದಲ್ಲಿದ್ದ ಸಂಸ್ಥೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಬಗ್ಗೆ ಕಾಸರಗೋಡಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡ್ ಕೈಕಂಬ ಸಮೀಪದ ತಾಳಿಪಡ್ಡು ನಿವಾಸಿ ಮುಹಮ್ಮದ್ ಫಾರೂಕ್ ನಾಪತ್ತೆಯಾದ ಯುವಕ. ಈತ ನ.28ರಂದು ಬೆಳಗ್ಗೆ 7:30ಕ್ಕೆ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸ್ ಬಂದಿಲ್ಲ ಎಂದು ಅವರ ಪತ್ನಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಸರಗೋಡು ಟೌನ್ ಪೊಲೀಸ್ ಠಾಣೆಯಲ್ಲಿ ಇದೇ ಮುಹಮ್ಮದ್ ಫಾರೂಕ್ ವಿರುದ್ಧ ಸುಲ್ತಾನ್ ಜುವೆಲ್ಲರಿಗೆ ಕೋಟ್ಯಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ವಂಚನೆ ನಡೆದಿರುವುದಾಗಿ ದೂರಲಾಗಿದೆ.
ಸುಮಾರು ಒಂದೂವರೆ ವರ್ಷದಲ್ಲಿ ನೌಕರನೋರ್ವ ಜುವೆಲ್ಲರಿಯಲ್ಲಿದ್ದ ಸುಮಾರು 2 ಕೋಟಿ 88 ಲಕ್ಷಕ್ಕೂ ಅಧಿಕ ಮೌಲ್ಯದ ವಜ್ರ, ಚಿನ್ನಾಭರಣ ದೋಚಿದ್ದಾನೆ ಎಂದು ದೂರಲಾಗಿದೆ.
ಜುವೆಲ್ಲರಿಯಲ್ಲಿ ಶನಿವಾರ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭ ಆತ ನಡೆಸಿರುವ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಜುವೆಲ್ಲರಿಯಲ್ಲಿ ಸೇಲ್ಸ್ ಮೆನೇಜರ್ ಆಗಿ ಕೆಲಸದಲ್ಲಿ ಇದ್ದ ಆತ ಶನಿವಾರ ಚಿನ್ನಾಭರಣಗಳ ಲೆಕ್ಕ ಪರಿಶೋಧನೆ ನಡೆಯುತ್ತಿದ್ದಂತೆ ಜುವೆಲ್ಲರಿಯಿಂದ ತಪ್ಪಿಸಿಕೊಂಡು ಬಿ.ಸಿ.ರೋಡ್ ಮನೆಗೆ ಬಂದಿದ್ದು ರವಿವಾರದಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.