ಮಂಗಳೂರು: ಕುಷ್ಠರೋಗ ನಿವಾರಣಾ ಘಟಕದ ಜಿಲ್ಲಾ ಮಟ್ಟದ ಅಧಿಕಾರಿ ಡಾ.ರತ್ನಾಕರ್ ಸಹೋದ್ಯೋಗಿ ಮಹಿಳಾ ಸಿಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋ ಲೀಕ್ ಆಗಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಬಳಿಕ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲದೆ, ಆರೋಪಿ ಬಂಧನವೂ ಆಗಿತ್ತು. ಮಾಧ್ಯಮಗಳಿಗೆ ಆಹಾರವಾಗಿದ್ದ ಆರೋಪಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರೂ, ಎರಡೇ ಗಂಟೆಯಲ್ಲಿ ಅದೇ ನ್ಯಾಯಾಲಯ ಜಾಮೀನು ನೀಡಿದ್ದು ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.
ಈ ಹಿಂದೆ ಮಂಗಳೂರಿನ ವಕೀಲನೊಬ್ಬ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದ್ದಲ್ಲದೆ, ಆರೋಪಿ ವಕೀಲ ತಲೆಮರೆಸಿಕೊಂಡು ಕುಳಿತಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮಂಗಳೂರಿನ ಸರಕಾರಿ ಸೇವೆಯಲ್ಲಿರುವ ಅಧಿಕಾರಿಯೊಬ್ಬ ಸಹೋದ್ಯೋಗಿ ಮಹಿಳಾ ಸಿಬಂದಿ ಜೊತೆಗೆ ದುರ್ವರ್ತನೆ ತೋರಿದ್ದ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಪ್ರಕರಣದಲ್ಲಿ ಯಾವುದೇ ಸಂತ್ರಸ್ತ ಮಹಿಳೆ ದೂರು ನೀಡಲು ಮುಂದಾಗದೇ ಇದ್ದ ಕಾರಣ ಸಾಮಾಜಿಕ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದರು. ಅದರಂತೆ, ಪೊಲೀಸರು ಐಪಿಸಿ 354ರ ಪ್ರಕಾರ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿದ್ದರು.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತ ಸಹೋದ್ಯೋಗಿ ಮಹಿಳೆಯರ ಜೊತೆ ಮಡಿಕೇರಿ, ಮುರ್ಡೇಶ್ವರಕ್ಕೆ ಪ್ರವಾಸ ಹೋಗಿದ್ದನ್ನು ಒಪ್ಪಿಕೊಂಡಿದ್ದ. ಅದರಂತೆ, ಪೊಲೀಸರು ಆರೋಪಿ ರತ್ನಾಕರನನ್ನು ಬಂಧಿಸಿದ್ದಲ್ಲದೆ, ಕೋರ್ಟಿಗೆ ಹಾಜರು ಪಡಿಸಿ ಎರಡು ದಿನ ಕಸ್ಟಡಿಗೆ ಪಡೆದಿದ್ದರು. ಸೋಮವಾರ ಸಂಜೆ ನಾಲ್ಕು ಗಂಟೆಗೆ ಮತ್ತೆ ಕೋರ್ಟಿಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಮಾಡಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಜೈಲಿಗೆ ಕೊಂಡೊಯ್ದಿದ್ದರು.
ಕೋರ್ಟ್ ಆದೇಶ ಹೊರಬಿದ್ದ ಬೆನ್ನಲ್ಲೇ ಶನಿವಾರ ಸಲ್ಲಿಸಿದ್ದ ಜಾಮೀನು ಅರ್ಜಿ ಸೋಮವಾರ ಸಂಜೆ ವಿಚಾರಣೆಗೆ ಬಂದಿದ್ದು, ಅದೇ ಸೆಷನ್ಸ್ ಕೋರ್ಟಿನಲ್ಲಿ ನಡೆದಿದೆ. ಆರೋಪಿ ಪರ ವಕೀಲ ನರಸಿಂಹ ಹೆಗಡೆ ಪ್ರಬಲ ವಾದ ಮಂಡಿಸಿದ್ದು, ಲೀಗಲ್ ಬೇಸ್ ಮೇಲೆ ವಾದ ಮುಂದಿಟ್ಟಿದ್ದಾರೆ. ಪ್ರಕರಣದಲ್ಲಿ ಯಾವುದೇ ಸಂತ್ರಸ್ತೆ ದೂರು ನೀಡಿಲ್ಲ. ಅಲ್ಲದೆ, ದೂರು ನೀಡಿದವರು ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಆಧರಿಸಿ ದೂರು ನೀಡಿದ್ದಾರೆ. ಘಟನೆಯನ್ನು ಯಾರೂ ಮಾಧ್ಯಮಗಳ ಹೊರತಲ್ಲದೆ ಕಣ್ಣಾರೆ ಕಂಡವರಲ್ಲ. ಹೀಗಾಗಿ ದೂರು ನೀಡಿದವರು ಮೂರನೇ ವ್ಯಕ್ತಿಯಾಗಿದ್ದು ಉದ್ದೇಶಪೂರ್ವಕ ದೂರಿತ್ತಿದ್ದಾರೆ. ಆರು ವರ್ಷದ ಒಳಗೆ ಶಿಕ್ಷೆ ನೀಡಬಹುದಾದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ಪ್ರಕಾರ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕಿಲ್ಲ ಎಂದು ವಾದಿಸಿದ್ದು ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗೆ ಜಾಮೀನು ನೀಡಿದ್ದಾರೆ.
ಹೀಗಾಗಿ ಅತ್ತ ಜೈಲಿಗೆ ಹೋದ ಎರಡೇ ಗಂಟೆಯಲ್ಲಿ ಆರೋಪಿ ರತ್ನಾಕರ್ ಬಿಡುಗಡೆಯಾಗಿದ್ದು ಆರು ಗಂಟೆ ವೇಳೆಗೆ ಕೋರ್ಟ್ ಆದೇಶವನ್ನು ತೋರಿಸಿ ವಕೀಲರೇ ಆರೋಪಿಯನ್ನು ಹೊರತಂದಿದ್ದಾರೆ. ಪೊಲೀಸರು ಎರಡು ದಿನ ಕಸ್ಟಡಿ ಪಡೆಯದೇ ಇರುತ್ತಿದ್ದರೆ, ಶನಿವಾರವೇ ಜಾಮೀನು ಸಿಗುವ ಸಾಧ್ಯತೆಯೂ ಇತ್ತು. ಹಾಗಾಗಿ ಪೊಲೀಸರು ಎರಡು ದಿನ ಠಾಣೆಯಲ್ಲಿ ಕುಳ್ಳಿರಿಸಿದ್ದು ಸಾಧನೆ ಎನ್ನುವಂತಾಗಿದೆ. ಕೈಯಲ್ಲಿ ಕಾಸಿದ್ದರೆ, ಪೊಲೀಸರು ಕೇಸು ದಾಖಲಿಸಿದರೂ ಜೈಲಿಗೆ ಹೋಗುವುದರಿಂದ ಪಾರಾಗಿ ಬರಬಹುದು ಎಂಬುದು ಈ ಘಟನೆಯಿಂದ ಸಾಬೀತಾಗಿದೆ