ಬೆಂಗಳೂರು: ಹೆದ್ದಾರಿಯಲ್ಲಿ ರಾತ್ರಿ ವೇಳೆ ನಡೆದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ ವಾಹನಗಳು ಸಂಚಾರ ಮಾಡಿದ್ದು, ಮೃತಶರೀರ ಸಂಪೂರ್ಣ ಚೆಲ್ಲಾಪಿಲ್ಲಿಯಾದ ದಾರುಣ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ರಾಯರಪಾಳ್ಯ ಬಳಿ ಈ ಘಟನೆ ನಡೆದಿದ್ದು ಮಾನವೀಯತೆ ಸತ್ತು ಹೋಗಿದೆಯೇ ಅನ್ನಿಸುವಂತಾಗಿದೆ.
ಶನಿವಾರ ರಾತ್ರಿ ವೇಳೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹದ ಮೇಲೆ ರಾತ್ರಿ ಪೂರ್ತಿ ವಾಹನಗಳ ಓಡಾಟ ಮಾಡಿವೆ. ಇದರ ಪರಿಣಾಮ ರಸ್ತೆಯ ಉದ್ದಕ್ಕೂ ಮೃತ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆ ಚೂರು ಚೂರಾದ ಮಾಂಸದ ತುಂಡುಗಳನ್ನ ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.