ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಬಗ್ಗೆ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ, ಈ ಬಗ್ಗೆ ಜನತೆ ಗಾಬರಿಪಡುವ ಅಗತ್ಯವಿಲ್ಲ , ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಕೋವಿಡ್ ರೂಪಾಂತರಿತ ಹೊಸ ತಳಿ ಒಮಿಕ್ರಾನ್ ವಿಚಾರವನ್ನು ಮುಂದಿಟ್ಟು ಲಾಕ್ ಡೌನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲಮಯ, ತಪ್ಪು ಸುದ್ದಿ ಹರಡುತ್ತಿರುವುದು ಕಂಡುಬರುತ್ತಿದೆ. ಈ ರೀತಿ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಬೇಡಿ ಎಂದು ಹೇಳಿದ್ದಾರೆ.
ಕೋವಿಡ್ 1 ಮತ್ತು 2 ಅಲೆಯಿಂದ ಈಗಾಗಲೇ ಜನಸಾಮಾನ್ಯರು ಬಹಳ ಕಷ್ಟ-ನಷ್ಟ ಅನುಭವಿಸಿದ್ದಾರೆ. ಹಲವು ಜೀವಹಾನಿ ಉಂಟಾಗಿದೆ. ಆದ್ದರಿಂದ ಜನರಲ್ಲಿ ಮತ್ತೆ ಗೊಂದಲ ಮೂಡಿಸಬೇಡಿ. ಅಂತಹ ವಿಚಾರಗಳನ್ನು ಸರ್ಕಾರವೇ ವಿವರಿಸುತ್ತದೆ. ಜನರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.