ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಕುಷ್ಠ ರೋಗ ವಿಭಾಗದ ವೈದ್ಯನೊಬ್ಬ ಸಹೋದ್ಯೋಗಿ ಯುವತಿಯರ ಜೊತೆ ಚಕ್ಕಂದ ಆಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ವೈದ್ಯನನ್ನು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಸಸ್ಪೆಂಡ್ ಮಾಡಿದ್ದಾರೆ.
ವೆನ್ಲಾಕ್ ಕುಷ್ಠ ರೋಗ ವಿಭಾಗದ ವೈದ್ಯ ಡಾ. ರತ್ನಾಕರ್ ಕರ್ತವ್ಯದಿಂದ ಅಮಾನತಾಗಿರುವ ವೈದ್ಯಾಧಿಕಾರಿ. ಕಳೆದ ಹಲವು ಸಮಯದಿಂದ ಈತ ತನ್ನ ವಿಭಾಗದ ಕೆಲವು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವಿಚಾರ ಅಲ್ಲಿನ ಇತರ ಸಿಬಂದಿಗೂ ತಿಳಿದಿತ್ತು.
ಆತನ ಜೊತೆ ಸಹಕರಿಸದೇ ಇದ್ದವರಿಗೆ ರತ್ನಾಕರ್, ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಕಿರುಕುಳಕ್ಕೆ ಒಳಗಾದವರು ಮತ್ತು ಆಸ್ಪತ್ರೆಯ ಬೇರೆ ವಿಭಾಗದ ಸಿಬಂದಿ ಸೇರಿ ಜಿಲ್ಲಾ ಆರೋಗ್ಯಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ರಾಜ್ಯ ಆರೋಗ್ಯ ಇಲಾಖೆಗೂ ದೂರು ಹೋಗಿತ್ತು.
ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದು ರಿಪೋರ್ಟ್ ನೀಡಿದ್ದರು ಎನ್ನಲಾಗಿದೆ. ವರದಿ ಆಧರಿಸಿ ಕಾಮುಕ ವೈದ್ಯನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಇನ್ನೊಂದು ಮೂಲದ ಪ್ರಕಾರ, ಕುಷ್ಠ ರೋಗ ವಿಭಾಗವನ್ನು ಆರು ತಿಂಗಳ ಹಿಂದೆ ಲೇಡಿಹಿಲ್ ಉಪ ವಿಭಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿಯೂ ಈತನ ಕಾಮ ಪುರಾಣ ಮುಂದುವರಿದಿತ್ತು. ಅಲ್ಲಿನ ಇತರ ಸಿಬಂದಿ ಇದನ್ನು ತಿಳಿದು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗೆ ದೂರು ನೀಡಲಾಗಿತ್ತು ಎನ್ನುವ ಮಾಹಿತಿಗಳಿವೆ. ಇದೇ ವಿಚಾರದಲ್ಲಿ ವೈದ್ಯ ರತ್ನಾಕರನನ್ನು ತಿಂಗಳ ಹಿಂದೆ ಉತ್ತರ ಕರ್ನಾಟಕದ ಆಸ್ಪತ್ರೆ ಒಂದಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ರತ್ನಾಕರ್ ಪ್ರಭಾವಿಯಾಗಿದ್ದು ರಾಜಕೀಯ ಒತ್ತಡದ ಮೂಲಕ ಮತ್ತೆ ಮಂಗಳೂರಿಗೆ ನಿಯೋಜನೆ ಮಾಡಿಕೊಂಡಿದ್ದ. ಮುಂದಿನ ವಾರ ಆತ ಮತ್ತೆ ಅದೇ ಜಾಗಕ್ಕೆ ಬರಲಿದ್ದಾನೆ ಎನ್ನುವ ಮಾಹಿತಿ ತಿಳಿಯುತ್ತಲೇ ಹಳೆ ಫೋಟೊ, ವಿಡಿಯೋಗಳನ್ನು ಮಾಧ್ಯಮಕ್ಕೆ ಸಿಗುವಂತೆ ಹೊರಗೆ ಬಿಟ್ಟಿದ್ದಾರೆ.