Ad Widget .

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ|

Ad Widget . Ad Widget .

ಪುತ್ತೂರು: ಆತ ತಾನು ಖರೀದಿಸಿಸ ಪ್ರೀತಿಯ ಕೃಷಿ ಭೂಮಿಯನ್ನು ನೋಡಲು ಬಂದಿದ್ದ. ಆದರೆ ವಿಧಿಯಾಟ ಬೇರೆ ಆಗಿತ್ತು. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಆತನನ್ನು ಸಂಬಂಧಿಕರೇ ಫೋಟೋ ಫ್ರೇಮ್ ನೊಳಗೆ ಆಗುವಂತೆ ಮಾಡಿದ್ದಾರೆ. ಜಮೀನು ನೋಡಲು ಬಂದವನನ್ನು ಸಂಬಂಧಿಕರೇ ಕೊಲೆಮಾಡಿ ಕಾಡಿನ ಮಧ್ಯೆ ಹೂತು ಹಾಕಿದ್ದಾರೆ. ಈ ಘಟನೆ ನಡೆದದ್ದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ. ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್ (58) ಎಂಬವರೇ ಕೊಲೆಯಾದ ದುರ್ದೈವಿ.

Ad Widget . Ad Widget .

ತನ್ನ ಕೃಷಿ ಭೂಮಿಯನ್ನು ಮುಗುಳಿ ನಿವಾಸಿ ವಿಲಿಯರ್ಸ್ ಸುಬ್ಬಯ್ಯ ಅಲಿಯಾಸ್ ಬಾಲಕೃಷ್ಣ ರೈ ಎಂಬವರ ಜೊತೆ ಸೇರಿ ಸುಮಾರು ಎರಡೂವರೆ ಎಕರೆ ಜಾಗ ಖರೀದಿಸಿದ್ದರು. ಈ ಜಾಗದ ಖರೀದಿಯ ಬಳಿಕ ಜಾಗವನ್ನು ನೊಂದಣಿ ಮಾಡಲು ಜಗದೀಶ್ ಸಂಬಂಧಿ ಬಾಲಕೃಷ್ಣ ರೈ ಹಿಂದೇಟು ಹಾಕಿದ್ದರು. ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರು ಪಂಜದಲ್ಲಿ ಜಮೀನನ್ನು ಖರೀದಿಸಿರುವ ಜಗದೀಶ್ ಆ ಜಾಗದಲ್ಲಿ ಮನೆ ನಿರ್ಮಿಸಿ ಪುತ್ತೂರಿನಲ್ಲೇ ಸೆಟಲ್ ಆಗಲು ತೀರ್ಮಾನಿಸಿದ್ದರು. ಈ ನಡುವೆ ಈ ಜಾಗವನ್ನು ಜಗದೀಶ್ ರೈ ಅವರ ಗಮನಕ್ಕೆ ತಾರದೆ ಬಾಲಕೃಷ್ಣ ರೈ ತಮ್ಮ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಲು ತೀರ್ಮಾನಿಸಿದ್ದರು.

ಈ ವಿಚಾರದ ಬಗ್ಗೆ ಮಾತುಕತೆ ನಡೆಸಲು ಜಗದೀಶ್ ನವಂಬರ್ 17 ರಂದು ಮೈಸೂರಿನಿಂದ ಪುತ್ತೂರಿಗೆ ಬಂದಿದ್ದರು. ಪುತ್ತೂರಿಗೆ ಬಂದ ಬಳಿಕ ಜಗದೀಶ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅನುಮಾನಗೊಂಡ ಜಗದೀಶ್ ಮನೆಯವರು ಮೈಸೂರಿನಲ್ಲಿ ಈ ಸಂಬಂಧ ಪೋಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ಜಗದೀಶ್ ನಾಪತ್ತೆಯ ವಿಚಾರವಾಗಿ ಪೋಲೀಸರು ಬಾಲಕೃಷ್ಣ ರೈ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಆರೋಪಿ ಬಾಲಕೃಷ್ಣ ರೈ ಪೋಲೀಸರಿಗೆ ಜಗದೀಶ್ ನವಂಬರ್ 18 ರಂದೇ ಮೈಸೂರಿಗೆ ವಾಪಾಸು ಹೋಗಿದ್ದಾರೆ, ಹಾಗೂ ಅವರನ್ನು ಮಾರುತಿ ಒಮ್ನಿ ಕಾರಿನಲ್ಲೇ ತಾನೇ ಸುಳ್ಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದರು.

ಈ ಹಿನ್ನಲೆಯಲ್ಲಿ ಪೋಲೀಸರು ಜಗದೀಶ್ ಅವರ ಪತ್ತೆಗಾಗಿ ಶೋಧ ನಡೆಸಿದ್ದರು. ಈ ನಡುವೆ ಆರೋಪಿ ಬಾಲಕೃಷ್ಣ ರೈ ನೀಡಿದ ಮಾಹಿತಿಯನ್ನು ಪರಿಶೀಲಿಸಿದ ಪೋಲೀಸರಿಗೆ ಆರೋಪಿಯು ಜಗದೀಶ್ ಅವರನ್ನು ಮಾರುತಿ ಒಮ್ನಿ ಕಾರಿನಲ್ಲಿ ಸುಳ್ಯಕ್ಕೆ ಕಳುಹಿಸಿದ ಕುರಿತ ಯಾವುದೇ ಕುರುಹು ದೊರೆತಿಲ್ಲ. ಪುತ್ತೂರಿನ ಕಾವು ಎಂಬಲ್ಲಿ ಕಾರು ನಿಲ್ಲಿಸಿ ಸುಳ್ಯಕ್ಕೆ ಕಳುಹಿಸಿರುವುದಾಗಿ ಹೇಳಿಕೆ ನೀಡಿರುವುದನ್ನು ಪರಿಶೀಲಿಸಿದ ಸ್ಥಳೀಯ ಪೋಲೀಸರು ಕಾವಿನ ಮಸೀದಿಯೊಂದರ ಸಿಸಿ ಕ್ಯಾಮಾರಾ ವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಆರೋಪಿ ಹೇಳಿದ ಸಮಯದಲ್ಲಿ ಇಂಥಹ ಯಾವುದೇ ಘಟನೆ ನಡೆದಿರುವುದು ಪೋಲೀಸರ ಗಮನಕ್ಕೆ ಬಂದಿದೆ.

ಈ ಅನುಮಾನದ ಹಿನ್ನಲೆಯಲ್ಲಿ ಆರೋಪಿ ಬಾಲಕೃಷ್ಣ ರೈ ಯನ್ನು ಸೂಕ್ತ ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿಯ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ಮಗ ಹಾಗೂ ಇನ್ನೊಬ್ಬ ಯುವಕನ ಜೊತೆ ಸೇರಿಕೊಂಡು ಜಗದೀಶ್ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಪೋಲೀಸರು ಬಾಲಕೃಷ್ಣ ರೈ, ಆತನ ಮಗ ಪ್ರಶಾಂತ್ ರೈ ಹಾಗೂ ಜೀವನ್ ಗೌಡ ಎನ್ನುವ ಮೂವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂಪ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಆರೋಪಿಗಳು ಸುತ್ತಿಗೆಯಿಂದ ಜಗದೀಶ್ ತಲೆಗೆ ಹೊಡೆದು ಕೊಲೆ ನಡೆಸಿರುವ ಸಾಧ್ಯತೆಯಿದ್ದು, ಈ ಸಂಬಂಧ ಪೋಲೀಸರು ಕೊಲೆಗೆ ಬಳಸಿದ ಮಾರಕಾಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ಜಗದೀಶ್ ಶವವನ್ನು ಮುಗುಳಿ ರಕ್ಷಿತಾರಣ್ಯದಲ್ಲಿ ಮಣ್ಣಿನಲ್ಲಿ ಹೂತಿದ್ದು, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ರಾತ್ರೋರಾತ್ರಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ.

ಜಗದೀಶ್ ಅವರನ್ನು ಕೊಲೆ ನಡೆಸಿದ ಬಳಿಕ ಆರೋಪಿಗಳು ಕೊಲೆಯ ಬಗ್ಗೆ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಜಗದೀಶ್ ಅವರ ಮೊಬೈಲ್ ಪೋನನ್ನು ನವಂಬರ್ 18 ರಂದೇ ಜಗದೀಶ್ ಮನೆಯ ಪಕ್ಕದಲ್ಲೇ ಎಸೆದು ಹೋಗಿದ್ದು, ಪೋಲೀಸರು ಮೊಬೈಲ್ ನ ಲೊಕೇಶನ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಗದೀಶ್ ಮೊಬೈಲ್ ಮೈಸೂರಿನಲ್ಲೇ ಇರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಆರೋಪಿಗಳ ಬಗ್ಗೆ ಪೋಲೀಸರಿಗೆ ಮೊದಲಿಗೆ ಯಾವುದೇ ಸಂದೇಹವೂ ಬಂದಿರಲಿಲ್ಲ.

ಪ್ರಮುಖ ಆರೋಪಿಯಾಗಿರುವ ಬಾಲಕೃಷ್ಣ ರೈ ಕೊಲೆಯಾದ ಜಗದೀಶ್ ಅವರ ದೂರದ ಸಂಬಂಧಿಯಾಗಿದ್ದು, ಜಗದೀಶ್ ಅವರಿಂದ ನಿರಂತರ ಹಣವನ್ನು ಪಡೆದುಕೊಂಡು ವಂಚನೆ ನಡೆಸುತ್ತಿದ್ದ ಎನ್ನುವ ಮಾಹಿತಿಯೂ ಇದೀಗ ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿ ಬಾಲಕೃಷ್ಣ ರೈ ಈ ಹಿಂದೆ ಊರಿನ ಕೃಷಿ ತೋಟದಿಂದ ಕೃಷಿ ಪಂಪ್ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದು, ಈ ಕಾರಣಕ್ಕಾಗಿ ಆತನಿಗೆ ಊರಿನಲ್ಲಿ ವಿಲಿಯರ್ಸ್ ಸುಬ್ಬಯ್ಯ ಎನ್ನುವ ಅಡ್ಡ ಹೆಸರಲ್ಲೂ ಗುರುತಿಸಿಕೊಂಡಿದ್ದರು. .

Leave a Comment

Your email address will not be published. Required fields are marked *