ಉಡುಪಿ : ಕಡಲು ಕೋಟ್ಯಾಂತರ ಜಲಚರಗಳ ಸಂಪತ್ತು. ಸಮುದ್ರದಲ್ಲಿ ಸಾವಿರಾರು ಬಗೆಯ ಮತ್ಸ್ಯ ಸಂತತಿ ಇದೆ. ಸಣ್ಣಪುಟ್ಟ ಮೀನುಗಳಿಂದ ಹಿಡಿದು ಗಜಗಾತ್ರದ ಮೀನುಗಳೂ ಇವೆ. ಈ ಮತ್ಸ್ಯ ಗಳ ಬೇಟೆಗೆ ಸಾವಿರಾರು ಜನ ಮೀನುಗಾರರು ಕಡಲಿನತ್ತ ಮುಖ ಮಾಡುತ್ತಾರೆ.
ರಾಜ್ಯದ ಕರಾವಳಿ ತೀರವಾದ ಉಡುಪಿಯಿಂದ ಹೊರಟ ಮೀನುಗಾರರಿಗೆ ಬಂಪರ್ ಹೊಡೆದಿದೆ. ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ. ಮೀನುಗಾರರಿಗೆ ಸಾಕ್ಷ್ಯಾತ್ ಮತ್ಸ್ಯ ಕನ್ಯೆಯೇ ಒಲಿದಿದ್ದು, ಮೀನುಗಾರರು ಹಿಡಿದ ಆ ಒಂದು ಮೀನು ಒಂದು ಲಕ್ಷದ ಎಂಭತ್ತು ಸಾವಿರಕ್ಕೆ ಮಾರಾಟವಾಗಿದೆ.
ಮಲ್ಪೆ ಕಡಲ ಕಿನಾರೆಯಿಂದ ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿದ್ದ ಶಾನ್ ರಾಜ್ ತೊಟ್ಟಂ ಎಂಬುವವರ ಬಲರಾಮ್ ಎಂಬ ಹೆಸರಿನ ಬೋಟ್‌ಗೆ ಅದೃಷ್ಟ ಲಕ್ಷ್ಮಿಯೇ ಖುಲಾಯಿಸಿದ್ದಾಳೆ. ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಅನ್ನುವ ಮೀನು ಲಭ್ಯವಾಗಿದ್ದು, ಈ ಮೀನು ಬರೋಬ್ಬರಿ ಒಂದು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಟವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಮೀನು ಹರಾಜು ಪ್ರಕ್ರಿಯೆ ನಡೆದಿದ್ದು, ನೂರಾರು ಮಂದಿಯ ಕುತೂಹಲಕ್ಕೆ ಸಾಕ್ಷಿಯಾಗಿದೆ.
ಪ್ರತಿ ಕೆಜಿಯೊಂದಕ್ಕೆ 9060 ರೂಪಾಯಿಯಂತೇ ಗೋಳಿ ಮೀನು ಮಾರಾಟವಾಗಿದೆ. ಈ ಗೋಳಿ ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿರುತ್ತದೆ. ಆದರೆ ಮೀನುಗಾರರ ಬಲೆಗೆ ಬೀಳೋದು ಬಲು ಅಪರೂಪವಾಗಿದೆ.