ಬೆಂಗಳೂರು- ಕಳೆದ ಎರಡು ವಾರಗಳಿಂದಲೂ ಸತತವಾಗಿ ಬೀಳುತ್ತಿರುವ ಅಕಾಲಿಕ ಮಳೆ ಇಂದೂ ಕೂಡ ಮುಂದುವರೆಯಲಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಸತತವಾಗಿ ರಾಜ್ಯದ ಒಳನಾಡಿನಲ್ಲಿ ಮಳೆಯಾಗುತ್ತಿದೆ.
ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು, ರಾಮನಗರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಹಾಗೂ ಭಾರೀ ಪ್ರಮಾಣದ ಮಳೆಯಾಗಿದೆ.
ನವೆಂಬರ್ ನಲ್ಲಿ ಇಷ್ಟೊಂದು ಮಳೆಯಾಗಿರುವುದು ಹೊಸ ದಾಖಲೆಯನ್ನೇ ನಿರ್ಮಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.
ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರು ಸುತ್ತಮುತ್ತ ಇಂದು ಸಂಜೆ ಹಾಗೂ ರಾತ್ರಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣ ಇನ್ನು ಒಂದು ವಾರ ಮುಂದುವರೆಯುವ ಸಾಧ್ಯತೆಗಳಿವೆ. ನ.26ಕ್ಕೆ ಮತ್ತೊಂದು ವಾಯುಭಾರ ಕುಸಿತ ಪ್ರಬಲವಾಗುತ್ತಿದ್ದು, ಆನಂತರವೂ ಮತ್ತೊಂದು ಸುತ್ತಿನ ಮಳೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದುವರೆಯುವುದು ಎಂದು ಹೇಳಿದರು.