ಬೆಳ್ತಂಗಡಿ: ಅಳಿವಿನಂಚಿನಲ್ಲಿರುವ ಶ್ರೀ ತಾಳೆ ಮರ ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ಕಾರಣಕ್ಕಾಗಿ ಹೂ ಬಿಟ್ಟ ತಾಳೆ ಮರವನ್ನು ಕಡಿಯಲು ಮುಂದಾಗಿದ್ದ ಗ್ರಾಮಸ್ಥರನ್ನು ಅರಣ್ಯ ಇಲಾಖೆ ತಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ದೇಲಂಪುರಿ ಎಂಬಲ್ಲಿ ಚಂದ್ರಶೇಖರ್ ಮತ್ತು ಗಿರಿಜಮ್ಮ ಎಂಬುವವರ ಜಾಗದಲ್ಲಿ 80 ವರ್ಷದ ಹಳೆಯದಾದ ತಾಳೆ ಮರ ಹೂ ಬಿಟ್ಟಿದ್ದು, ಈ ಮರ ಹೂ ಬಿಟ್ಟಿರೋದು ಊರಿಗೆ ಅನಿಷ್ಠ ಎಂಬ ಭಾವನೆ ಮನೆಯವರು ಮತ್ತು ಊರವರಿಗೆ ಕಾಡಿದೆ.
ಈ ಹಿನ್ನಲೆಯಲ್ಲಿ ಆದಿತ್ಯವಾರ ಊರವರು ಸೇರಿ ಧಾರ್ಮಿಕ ವಿಧಿವಿಧಾನದ ಮೂಲಕ ಮರ ಕಡಿಯುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದರು. ಈ ವಿಚಾರ ಪರಿಸರವಾದಿಗಳ ಗಮನಕ್ಕೆ ಬಂದು ಮರದ ಉಪಯೋಗವನ್ನು ತಿಳಿಸಿ ಮರ ಕಡಿಯದಂತೆ ಮನವಿ ಮಾಡಿದ್ದಾರೆ.
ಆದರೆ ಮನವಿಗೆ ಕ್ಯಾರೇ ಅನ್ನದ ಗ್ರಾಮಸ್ಥರು ಮರವನ್ನು ಕಡಿದೇ ತೀರುತ್ತೇವೆ ಅಂತಾ ಪಟ್ಟು ಹಿಡಿದಿದ್ದರು. ಈ ಹಿನ್ನಲೆಯಲ್ಲಿ ಮರವನ್ನು ಉಳಿಸಿ ಅಂತಾ ವೇಣೂರು ಅರಣ್ಯ ಇಲಾಖೆಗೆ ಪ್ರಾಚ್ಯ ವಸ್ತು ಸಂಶೋಧಕ ಫ್ರೋ. ಎಸ್ ಎ ಕೃಷ್ಣಯ್ಯ ದೂರು ನೀಡಿದ್ದರು.
ದೂರು ಆಲಿಸಿದ ವೇಣೂರು ವಲಯ ಅರಣ್ಯಾಧಿಕಾರಿ ಮಹಿಮ್ ದೇಲಂಪುರಿ ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಆದೇಶದವರೆಗೆ ಮರ ಕಡಿಯದಂತೇ ಆದೇಶ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಮ್, “ಶ್ರೀ ತಾಳೆ ಮರವನ್ನು ಕಡಿಯೋದಕ್ಕೆ ಮನೆಯವರು ಅರಣ್ಯ ಇಲಾಖೆಯಿಂದ ಅನುಮತಿ ಕೇಳಿದ್ದರು. ಆದರೆ ಕಾನೂನಿನ ಪ್ರಕಾರ ಕೃಷಿ ಗೆ ಹಾನಿಯಾಗೋದಾರೆ ಒಂದು ಮನೆಯವರಿಗೆ ನೂರು ಮರ ಕಡಿಯಬಹುದು. ಆದರೆ ಇದಕ್ಕೂ ಹಲವು ಕಾನೂನುಗಳಿದ್ದು, ಜಾಗದ ಸರ್ವೇಯಾಗಬೇಕು ಮತ್ತು ಅರಣ್ಯ ಇಲಾಖೆಯಿದ ಒಪ್ಪಿಗೆ ಸಿಗಬೇಕು. ಈ ನಡುವೆ ಮರ ಕಡಿಯೋಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಸದ್ಯಕ್ಕೆ ಮರ ಕಡಿಯಲು ಅನುಮತಿ ನೀಡಿಲ್ಲ. ಅದು ಆಗಿಯೂ ಮರ ಕಡಿದರೆ ಮನೆಯವರ ಮೇಲೆ ಎಫ್ ಐ ಆರ್ ಮಾಡುತ್ತೇವೆ,” ಎಂದು ಹೇಳಿದ್ದಾರೆ.
ಇನ್ನು ಶ್ರೀ ತಾಳೆ ಮರ ಕಡಿಯುವ ಕುರಿತು ಸ್ಥಳಕ್ಕೆ ವರದಿಗೆ ತೆರಳಿದ ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ. ಮನೆಯ ಯಜಮಾನ ಚಂದ್ರಶೇಖರ್ ಮಾಧ್ಯಮದವರನ್ನು ತಡೆದು ನಾವು ಮರಕಡಿಯೋದು ಬಿಡೋದು ನಮ್ಮ ಇಷ್ಟ. ಸದ್ಯ ಮರ ಕಡಿಯೋದಿಲ್ಲ. ಆದರೆ ಕಡಿಯದೇ ಬಿಡೋದಿಲ್ಲ ಎಂದು ಹೇಳಿದ್ದಾರೆ. ಸದ್ಯ ಮರಕ್ಕೆ ಧಾರ್ಮಿಕ ವಿಧಿ ವಿಧಾನದ ಮೂಲಕ ಪೂಜೆ ಸಲ್ಲಿಸಲಾಗಿದೆ.
ಮರ ಕಡಿಯೋದನ್ನು ನಿಲ್ಲಿಸಿದ ವೇಣೂರು ಅರಣ್ಯ ಇಲಾಖೆಗೆ ಪ್ರಾಚ್ಯ ವಸ್ತು ಸಂಶೋಧಕ ಫ್ರೊ.ಎಸ್ ಎ ಕೃಷ್ಣಯ್ಯ ಧನ್ಯವಾದ ಸಲ್ಲಿಸಿದ್ದಾರೆ. ಈ ಮರ ಬಹಳ ಅಪರೂಪದ ಮರವಾಗಿದ್ದು, ಈ ಮರದಿಂದ ಬಹಳ ಉಪಯೋಗವಿದೆ. ಮರ ಹೂವು ಬಿಡೋದು ಅದರ ಅಂತ್ಯಕಾಲದಲ್ಲಿ ಮಾತ್ರ. ಶ್ರೀತಾಳೆ ಮರದಲ್ಲಿ ಜೀವಿತದ ಅಂತ್ಯಕಾಲದಲ್ಲಿ ಒಮ್ಮೆ ಮಾತ್ರ ಹೂವು ಬಿಡುತ್ತದೆ. ಇದರ ಆಯುಷ್ಯ 60-80 ವರ್ಷಗಳು. ಸುಮಾರು 8 ತಿಂಗಳ ಕಾಲ ಹೂವು ಮರದಲ್ಲಿರುತ್ತವೆ. ನಂತರ ಸುಮಾರು ಎಂಟು ತಿಂಗಳ ಕಾಲ ಬೀಜ ಕೂಡ ಮರದಲ್ಲಿರುತ್ತದೆ. ನಂತರ ಇವೆಲ್ಲವೂ ಉದುರಿ ಬೀಳುತ್ತವೆ. ಹೀಗೆ ಒಂದೇ ಮರದಲ್ಲಿ ಸುಮಾರು 2 ಟನ್ ಬೀಜಗಳು ಸಿಗುತ್ತವೆ. ಮುಂದೆ ಕ್ರಮೇಣವಾಗಿ ಈ ಮರ ಸಾಯುತ್ತದೆ. ಇವುಗಳ ಬೀಜ ಸಿಗುವ ಮುನ್ನವೇ ಅವುಗಳನ್ನು ಕಡಿದು ಅದರ ಸಂತತಿ ನಾಶವಾಗುತ್ತದೆ. ಇದರ ಬೀಜ ಸಂಗ್ರಹಣೆ ಮಾಡಿ ರಕ್ಷಿಸಬೇಕು. ಇಲ್ಲವಾದರೆ ಈ ಮರ ಅಳಿಯುತ್ತದೆ. ಆದರೆ ಅದಕ್ಕಿಂತ ಮುಂಚೆಯೇ ಮೂಢನಂಬಿಕೆಯಿಂದ ಇದನ್ನು ಕಡಿದರೆ ಇದರ ಸಂತತಿ ನಾಶವಾಗುತ್ತದೆ ಅಂತಾ ಸಂಶೋಧಕ ಫ್ರೊ. ಎಸ್.ಎ ಕೃಷ್ಣಯ್ಯ ಹೇಳಿದ್ದಾರೆ.
ಈ ಮರದ ಸಸ್ಯನಾಮ “ಕೊರಿಫಾ ಅಂಬ್ರಕುಲಿಫೆರಾ” (Corypha Umbraculifera) ಎಂಬುವುದಾಗಿದ್ದು, ಇಂಡೋನೇಷ್ಯಾ ಭಾಗದಲ್ಲಿ “ಲೊಂಟಾರ” (Lontara) ಎಂಬುದಾಗಿ ಕರೆಯುತ್ತಾರೆ. ಈ ಮರಕ್ಕೆ ಕನ್ನಡದಲ್ಲಿ ಶ್ರೀತಾಳೆ/ ಸೀತಾಳೆ, ಸಂಸ್ಕೃತದಲ್ಲಿ ಅವಿನಾಶಿ, ಕೇರಳದಲ್ಲಿ ಕೊಡಪಣ ಮರ ಹಾಗೂ ತುಳುವಿನಲ್ಲಿ ಪಣೋಲಿದ ಮರ ಎಂದೂ ಕರೆಯುತ್ತಾರೆ. ಈ ಮರವು ಸುಮಾರು 66 ವರ್ಷಗಳಿಗೊಮ್ಮೆ ಹೂ ಬಿಡವುದರ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಬೀಜವನ್ನು ಬಿಡುತ್ತದೆ. ಈ ಮರದ ಒಡಲಲ್ಲಿ ಸುಮಾರು 200-250 ಕೆ.ಜಿ.ಯಷ್ಟು ಸಬ್ಬಕ್ಕಿಯಂತ ಹಿಟ್ಟು/ತಿರುಳು ದೊರಕುತ್ತದೆ. ಇಂತಹಾ ಮರಗಳು ಕಾಡು-ನಾಡಿನಲ್ಲಿ ಇದ್ದರೆ ಸುಮಾರು 100 ಕುಟುಂಬಗಳು 3 ತಿಂಗಳುಗಳ ಕಾಲದಷ್ಟು ಆಹಾರವನ್ನು ಪಡೆಯಬಹುದು. ಇದರಲ್ಲಿ ಸಂಗ್ರಹ ಮಾಡಿದ ಸುಮಾರು 38,000 ಬೀಜಗಳನ್ನು ಕಾವೇರಿಯಿಂದ ವಾರಣಾಸಿಯವರೆಗೆ ಈಗಾಗಲೇ ಪ್ರಸಾರಣ ಮಾಡಲಾಗಿದೆ.
ಭಾರತೀಯ ಇತಿಹಾಸ, ಪುರಾಣ, ಕಾವ್ಯಗಳನ್ನು ಅಕ್ಷರ ರೂಪದಲ್ಲಿ ಬರೆದಿರುವುದು ಈ ಮರದ ಎಲೆಗಳಿಂದಲೇ. ಇವುಗಳನ್ನು “ತಾಡೋಲೆ ಗ್ರಂಥ” ಎಂದು ಕರೆಯಲಾಗುತ್ತದೆ. ಅಲ್ಲದೇ ಈ ಮರ ಮಣ್ಣಿನ ಸವಕಳಿಯನ್ನು ನಿಯಂತ್ರಣ ಮಾಡುತ್ತದೆ. ಹೂ ಬಿಟ್ಟ ಬಳಿಕ ಸಾಯುವ ಈ ಮರ ಸುಮಾರು ಮೂರು ಲಕ್ಷ ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಇವುಗಳಲ್ಲಿ ಕನಿಷ್ಠ 10%ದಷ್ಟು ಬೀಜ ಮತ್ತೆ ಸಸಿಯಾಗುತ್ತದೆ. ಈ ಮರ ಒಂದು ಕೀಲೋ ಮೀಟರ್‌ವರೆಗೂ ಬೇರುಗಳನ್ನು ಚಾಚುವ ಮೂಲಕ ಮಣ್ಣಿನ ಸವಕಳಿಯನ್ನು ತಡೆಯಬಹುದಾಗಿದೆ. ಅನೇಕ ಖಾಯಿಲೆಗಳನ್ನು ಶಮನ ಮಾಡುವ ಗುಣವನ್ನು ಈ ಮರ ಹೊಂದಿದೆ. ಹೀಗಾಗಿ ಮರದ ಮಹತ್ವವನ್ನು ತಿಳಿದು ಮರ ಕಡಿಯಬೇಡಿ ಅನ್ನೋದು ಸಂಶೋಧಕರ ಮನವಿಯಾಗಿದೆ.
ಸದ್ಯ ಮರ ಕಾನೂನಿನ ಮಧ್ಯಪ್ರವೇಶ ದಿಂದ ಬೀಸುವ ಕೊಡಲಿಯಿಂದ ತಪ್ಪಿಸಿಕೊಂಡಿದೆ. ಆದರೆ ಮರವನ್ನು ಉಳಿಸೋದು ಮಾತ್ರ ಕಾನೂನಿನ ಕೈಯಲ್ಲೂ ಇರದಿರೋದರಿಂದ ಗ್ರಾಮಸ್ಥರೇ ಮರದ ಮಹತ್ವವನ್ನು ಅರಿತು ಮರಕ್ಕೆ ಜೀವ ದಾನ ಮಾಡಬೇಕಾಗಿದೆ.