ಅನಂತಪುರ: ಭಾರಿ ಮಳೆಯಿಂದಾಗಿ ಭಾರಿ ಪ್ರವಾಹಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ದಕ್ಷಿಣ ಆಂಧ್ರ ಪ್ರದೇಶದ ರಾಯಲಸೀಮ ಪ್ರಾಂತ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅನಂತಪುರ, ತಿರುಪತಿ, ಚಿತ್ತೂರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ. ರಾಯಲಸೀಮಾ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಹಾನಿಗೀಡಾಗಿವೆ. ಗುರುವಾರದಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು ಪರಿಣಾಮ ಚೆಯ್ಯೂರು ನದಿ ತುಂಬಿ ಹರಿಯುತ್ತಿದೆ. ಅನ್ನಮಯ್ಯ ನೀರಾವರಿ ಯೋಜನೆಗೂ ಪ್ರವಾಹದಿಂದ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಡಪ ವಿಮಾನ ನಿಲ್ದಾಣವನ್ನು ನವೆಂಬರ್ 25 ರವರೆಗೆ ಮುಚ್ಚಲಾಗಿದೆ.
ತಿರುಪತಿ ಪ್ರವಾಹದಿಂದಾಗಿ ಕೊಚ್ಚಿ ಹೋಗಿದ್ದ ರಾಜ್ಯ ಸಾರಿಗೆಯ 3 ಬಸ್‌ಗಳು ಜಖಂಗೊಂಡಿದ್ದು, ಅದರೊಳಗಿದ್ದ 12 ಮಂದಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿ ಪರಿಸ್ಥಿತಿ ನಿಭಾಯಿಸಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಪ್ರವಾಹದಿಂದಾಗಿ ಹಲವೆಡೆ ರಸ್ತೆಗಳು ಹಾಳಾಗಿದ್ದು, ರೈಲು, ರಸ್ತೆ ಮತ್ತು ವಿಮಾನ ಸಂಚಾರಕ್ಕೆ ತೊಂದರೆಯಾಗಿದೆ.
ನಾಲ್ಕು ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಏಳು ಎನ್‌ಡಿಆರ್‌ಎಫ್ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಜೊತೆಗೆ ಪೊಲೀಸ್, ಕಂದಾಯ ಮತ್ತು ಅಗ್ನಿಶಾಮಕ ಇಲಾಖೆಯ ತಂಡಗಳನ್ನು ನಿಯೋಜಿಸಲಾಗಿದೆ.