ತಿರುಪತಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ. ಬುಧವಾರ ರಾತ್ರಿಯಿಂದೀಚೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ತಿರುಪತಿಯ ಹಲವು ತಗ್ಗುಪ್ರದೇಶ ಮತ್ತು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಪ್ರವಾಹ ಕಾಣಿಸಿಕೊಂಡಿದೆ.
ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ವಾಹನಗಳು ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇನ್ನು ತಿರುಮಲ ಬೆಟ್ಟಕ್ಕೆ ಹತ್ತುವ ರಸ್ತೆ ಮಾರ್ಗದಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಮರಗಳು ಬುಡಮೇಲಾಗಿವೆ. ಟಿಟಿಡಿ ವಸತಿಗೃಹಗಳು ಕೂಡಾ ನೀರಿನಲ್ಲಿ ಮುಳುಗಿಹೋಗಿವೆ.
ಇನ್ನು ತಿರುಮಲ ಬೆಟ್ಟದ ಬುಡದಲ್ಲಿರುವ ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದ ಮೇಲಿನಿಂದ ಮಳೆ ನೀರು ಜಲಪಾತದ ರೀತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯಗಳು ಮೈ ಜುಮ್ಮೆನಿಸುತ್ತಿವೆ. ಜಾಲತಾಣದಲ್ಲಿ ಹಂಚಿಕೊಳ್ಳಲಾದ ಇನ್ನೊಂದು ವಿಡಿಯೋದಲ್ಲಿ ತಿರುಮಲ ಘಾಟಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಳೆಗೆ ಕೊಚ್ಚಿಹೋದ ದೃಶ್ಯವಿದೆ.
ಭಾರಿ ಮಳೆ ಹಾಗೂ ಪ್ರವಾಹದಿಂದ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಕಲ್ಲು, ಬಂಡೆ ಹಾಗೂ ಮಣ್ಣು ತೆರವು ಕಾರ್ಯಾಚರಣೆಯೂ ನಡೆಯುತ್ತಿದೆ. ಆದರೆ ಭಾರಿ ಮಳೆ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಇಂದು(ನ.19) ನಡೆಯಬೇಕಿದ್ದ ಕಾರ್ತಿಕ ದೀಪೋತ್ಸವವು ವಿಶೇಷ ಪೂಜಾ ಕಾರ್ಯಕ್ರವನ್ನು ಮುಂದೂಡಲಾಗಿದೆ. ಈ ಕುರಿತು ತುರ್ತು ಸಭೆ ನಡೆಸಿದ ತಿರುಪತಿ ಆಡಳಿತ ಮಂಡಳಿ ದೀಪೋತ್ಸವವನ್ನು ಮುಂದೂಡಿದೆ.
ತಿರುಮಲ , ಚಿತ್ತೂರು ಸೇರಿದಂತೆ ತಿರುಪತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅತೀವ ಮಳೆ ಹಾಗೂ ಪ್ರವಾಹದಿಂದ ತಿರುಪತಿ, ತಿರುಮಲದಲ್ಲಿ ರಸ್ತೆಗಳೆಲ್ಲಾ ನದಿಗಳಾಗಿ ಬದಲಾಗಿದೆ. ರಸ್ತೆಯಲ್ಲಿ ನಿಂತಿದ್ದ ಆಟೋ, ಕಾರು ಬೈಕ್ ಚರಂಡಿಯಲ್ಲಿ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ ಹಲವು ವಾಹನಗಳು ಕೊಚ್ಚಿ ಹೋಗಿದೆ. ರಸ್ತೆಯಲ್ಲಿದ್ದ ಬಸ್‌ಗಳು ಬಹುತೇಕ ಮುಳುಗಡೆಯಾಗಿದ್ದು, ಬಸ್ ಮೇಲ್ಬಾಗ ಮಾತ್ರ ಕಾಣಿಸುತ್ತಿದೆ.
ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಸ್ಥಳೀಯ ಆಡಳಿತ ನಿರತವಾಗಿದೆ. ತಿರುಪತಿ ಬೆಟ್ಟದಿಂದ ಜಲಪಾತದಂತೆ ನೀರು ಉಕ್ಕಿ ಧುಮ್ಮಿಕ್ಕುತ್ತಿದೆ. ಬಿಡದೆ ಸುರಿಯುತ್ತಿರುವ ಮಳೆ ಈ ಅವಾಂತರ ಸೃಷ್ಟಿಸಿದೆ. ಆಂಧ್ರ ಪ್ರದೇಶ ಸರ್ಕಾರ ತುರ್ತು ಸಭೆ ಕರೆದು ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ಚರ್ಚಿಸಿದೆ. ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ, ಆಹಾರ ಸಾಮಾಗ್ರಿಗಳ ಪೂರೈಕೆ ಸೇರಿದಂತೆ ಪರಿಸ್ಥಿತಿ ನಿಭಾಯಿಸಲು ತಂಡಗಳನ್ನು ರಚಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಆರೇಂಜ್ ಹಾಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೆರಡು ದಿನ ಮಳೆ ಹೀಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಇದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.