ಬೆಂಗಳೂರು: ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದು ಬರೀ ಭಿಕ್ಷೆ ಮಾತ್ರ. ಒಂದು ಕೆನ್ನೆಗೆ ಹೊಡೆದರೆ ಎರಡೂ ಕೆನ್ನೆಗೆ ಹೊಡೆಸಿಕೊಳ್ಳಿ ಎಂದು ಗಾಂಧೀಜಿ ಅವರಿಗೆ ಸಿಗುವುದು ಭಿಕ್ಷೆ ಮಾತ್ರವೇ ಎಂದು ಹೇಳಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ಧಾರೆ.
ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್ ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತಿದೆ ಗಾಂಧಿ ಮೌಲ್ಯ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆಕೆಯಂಥವರು ಹೊಟ್ಟೆಪಾಡಿಗಾಗಿ ಬಟ್ಟೆ ಬಿಚ್ಚಿ ತಿರುಗುವವರು. ಅಂಥವರ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. ಮಾತನಾಡಿದಷ್ಟೂ ಅವರು ದೊಡ್ಡವರಾಗುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಅವರು ಹೇಳಿದ್ದಾರೆ. ನಗರದ ಮಹಾರಾಣಿ ಕಾಲೇಜು ಬಳಿಯ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಕಚೇರಿಯಲ್ಲಿ ದೇಶದ ಸ್ವಾತಂತ್ರ‍್ಯೋತ್ಸವದ 75ನೇ ವರ್ಷಾಚರಣೆ ನಿಮಿತ್ತ ನಡೆಸಲಾದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ ರಮೇಶ್ ಕುಮಾರ್ ಅವರು ಬಲಪಂಥೀಯರನ್ನ ಹಿಗ್ಗಾಮುಗ್ಗ ಝಾಡಿಸುವ ಪ್ರಯತ್ನ ಮಾಡಿದರು.
ನರಿಗಳು ಬಂದು ಖುರ್ಚಿಯಲ್ಲಿ ಕುಳಿತಿದ್ದಾರೆ. ನಾವು ಸಿಂಹದ ಮರಿಗಳು ಈ ನರಿಗಳಿಗೆ ಅಂಜುವುದು ಬೇಡ. ಅವರ ಆಟ ಸ್ವಲ್ಪ ದಿನ ಮಾತ್ರ ನಡೆಯಬಹುದು ಅಷ್ಟೇ. ನಾವು ಕಾದು ಮುನ್ನುಗ್ಗೋಣ ಎಂದು ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಕರೆ ನೀಡಿದರು.