ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಕಾಮೆಡಿಯನ್ ವೀರ್ ದಾಸ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದರ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ವಾಷಿಂಗ್ಟನ್ ಡಿ.ಸಿ.ಯ ಜಾನ್ ಎಫ್ ಕೆನಡಿ ಕೇಂದ್ರದಲ್ಲಿ ನಡೆದ ಇವೆಂಟ್‌ನಲ್ಲಿ ಕೊಟ್ಟ ಪ್ರದರ್ಶನವೊಂದರ ವಿಡಿಯೋವೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ.
ನಾನು ಎರಡು ಭಾರತಗಳಿಂದ ಬಂದಿದ್ದೇನೆ,” ಎನ್ನುವ ವೀರ್ ದಾಸ್, ದೇಶದಲ್ಲಿ ಘಟಿಸುತ್ತಿರುವ ಇಬ್ಬಂದಿತನದ ವಿಚಾರಗಳ ಉಲ್ಲೇಖ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪರ-ವಿರೋಧಗಳ ಚರ್ಚೆಗೆ ಗ್ರಾಸವಾಗಿದೆ.
ವೀರ್ ದಾಸ್ ಭಾರತಕ್ಕೆ ಅವಮಾನ ಮಾಡುವ ಮಾತುಗಳನ್ನು ಆಡಿದ್ದಾರೆ ಎಂದು ಕೆಲವೊಂದು ರಾಜಕಾರಣಿಗಳು ಹಾಗೂ ನೆಟ್ಟಿಗರು ತೀವ್ರವಾಗಿ ಟೀಕೆ ಮಾಡಿದ್ದಾರೆ. ಈ ಹಿಂದೆಯೂ ಸಹ ಬಹಳಷ್ಟು ಬಾರಿ ಪ್ರದರ್ಶನಗಳ ವೇಳೆ ಆಡಿದ ಮಾತುಗಳಿಂದ ವೀರ್ ದಾಸ್ ಭಾರೀ ವಿವಾದಕ್ಕೆ ಸಿಲುಕಿದ್ದಾರೆ.
”ನಮ್ಮಲ್ಲಿ ಎರಡು ಭಾರತ ಇದೆ, ಬೆಳಗಿನ ಸಮಯ ನಾವು ಮಹಿಳೆಯನ್ನು ಪೂಜಿಸುತ್ತೇವೆ, ರಾತ್ರಿ ಆದ ಕೂಡಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತೇವೆ, ಮಕ್ಕಳು ಮಾಸ್ಕ್ ಹಾಕಿಕೊಂಡು ಪರಸ್ಪರ ಕೈಹಿಡಿದುಕೊಳ್ಳುತ್ತಾರೆ, ಆದರೆ ರಾಜಕಾರಣಿಗಳು ಮಾಸ್ಕ್ ಇಲ್ಲದೆ ಪರಸ್ಪರ ಅಪ್ಪಿಕೊಳ್ಳುತ್ತಾರೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಇನ್ನೂ ಹಲವು ಧರ್ಮದ ಜನರು ಇಲ್ಲಿದ್ದಾರೆ ಆದರೆ ಎಲ್ಲರೂ ಆಕಾಶದತ್ತ ನೋಡಿದರೆ ಕಾಣುವುದು ಏರಿರುವ ಪೆಟ್ರೋಲ್ ಬೆಲೆಯಷ್ಟೆ. ನನ್ನ ಭಾರತದಲ್ಲಿ ಸಸ್ಯಹಾರಿಗಳೆಂದು ಎದೆ ತಟ್ಟಿಕೊಳ್ಳುತ್ತೇವೆ, ಆದರೆ ಅದೇ ತರಕಾರಿ ಬೆಳೆವ ರೈತರ ಮೇಲೆ ವಾಹನ ಹತ್ತಿಸುತ್ತೇವೆ” ಎಂದು ಶೋನಲ್ಲಿ ಹೇಳಿದ್ದಾರೆ ವೀರ್ ದಾಸ್.
ವೀರ್ ದಾಸ್ ಮಾತುಗಳ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಆದಿತ್ಯ ಝಾ, ”ವಿದೇಶಿ ನೆಲದಲ್ಲಿ ಈ ರೀತಿ ಭಾರತಕ್ಕೆ ಅಪಮಾನ ಮಾಡುವುದನ್ನು ಸಹಿಸುವುದಿಲ್ಲ. ನಾನು ಈ ಕಾನೂನು ಸಮರವನ್ನು ಅಂತ್ಯದ ವರೆಗೆ ತೆಗೆದುಕೊಂಡು ಹೋಗುತ್ತೇನೆ. ವೀರ್ ದಾಸ್ ಬಂಧನ ಆಗಲೇ ಬೇಕು” ಎಂದಿದ್ದಾರೆ.
ಆದಿತ್ಯ ಝಾ ಮಾತ್ರವೇ ಅಲ್ಲ ನಟಿ, ಬಿಜೆಪಿ ‘ಸಾಮಾಜಿಕ ಜಾಲತಾಣ ವಕ್ತಾರೆ’ ಕಂಗನಾ ರನೌತ್ ಸಹ ವೀರ್ ದಾಸ್ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥಹಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.