ಬೆಂಗಳೂರು: ಭಿಕ್ಷುಕನ ಅಗಲಿಕೆಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಇಡೀ ಜನತೆಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ವಿದಾಯ ಹೇಳಲು ಸಾವಿರಾರು ಜನರೇ ಆಗಮಿಸಿದ್ದರು.
ಎಲ್ಲರ ಬಾಯಲ್ಲೂ ಅರೆಹುಚ್ಚು ಬಸ್ಯಾ ಎಂದು ಕರೆಸಿಕೊಳ್ಳುತ್ತಿದ್ದ ಈತ ಏಕೆ ಹುಚ್ಚನಾದ ಎಂಬುದು ಯಾರಿಗೂ ಗೊತ್ತಿಲ್ಲ. ಕೆದರಿದ ಕೂದಲು, ಮೈಮೇಲಿನ ಬಟ್ಟೆ ಕೊಳೆಯಾಗಿದ್ದರೂ ಈತನ ಮೊಗದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಹೂವಿನಹಡಗಲಿ ತುಂಬಾ ಓಡಾಡಿ ಭಿಕ್ಷೆ ಬೇಡುತ್ತಿದ್ದ ಈತ ಯಾರೇ ಸಿಗಲಿ 1 ರೂ. ಮಾತ್ರ ಭಿಕ್ಷೆ ಕೇಳುತ್ತಿದ್ದ. 1 ರೂ.ಗಿಂತ ಜಾಸ್ತಿ ಹಣ ಕೊಟ್ಟರೆ ಅದನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಹೂವಿನಹಡಗಲಿ ಜನರು ಈತನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಅರೆಹುಚ್ಚು ಬಸ್ಯಾ ಏನಾದರೂ ಅಂಗಡಿಗೆ ಬಂದು ಭಿಕ್ಷೆ ಕೇಳಿದರೆ ಸಾಕು ಅಂದು ಆ ಅಂಗಡಿ ವ್ಯಾಪಾರ ಭರ್ಜರಿ ಆಗುತ್ತಿತ್ತು ಅಂತಾ ಅನೇಕರು ಹೇಳಿದ್ದಾರೆ. ಹೀಗಾಗಿ ಅಂಗಡಿ ವ್ಯಾಪಾರಸ್ಥರಿಗೆ ಬಸ್ಯಾನನ್ನು ಕಂಡರೆ ತುಂಬಾ ಪ್ರೀತಿ. ಆತನಿಗೆ ಪ್ರೀತಿಯಿಂದ ಸತ್ಕರಿಸಿ ಭಿಕ್ಷೆ ನೀಡುತ್ತಿದ್ದರಂತೆ. ಆದರೆ ಬಸ್ಯಾ 1 ರೂ. ಮೇಲೆ ಬಿಡಿಗಾಸು ಮುಟ್ಟುತ್ತಿರಲಿಲ್ಲವಂತೆ.
ಉಪಮುಖ್ಯಮಂತ್ರಿಯಾಗಿದ್ದ ದಿ. ಎಂ.ಪಿ.ಪ್ರಕಾಶ್, ಶಾಸಕರಾಗಿದ್ದ ಎಂ.ಪಿ.ರವೀಂದ್ರ ಅವರು ಕೂಡ ಬಸ್ಯಾನಿಗೆ ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರಂತೆ. ಹೂವಿನಹಡಗಲಿ ಜನತೆಯ ಪ್ರೀತಿಗೆ ಪಾತ್ರನಾಗಿದ್ದ ಬಸ್ಯಾ KSRTC ಬಸ್ ಹರಿದು ಸಾವನ್ನಪ್ಪಿದ್ದಾನೆ. ಈತನ ಸಾವಿಗೆ ಇಡೀ ಹೂವಿನಹಡಗಲಿಯಲ್ಲಿ ದುಃಖವೇ ಮಡುಗಟ್ಟಿತ್ತು. ತಮ್ಮ ಕುಟುಂಬ ಸದಸ್ಯನನ್ನೇ ಕಳೆದುಕೊಂಡಂತೆ ಇಲ್ಲಿನ ಜನರು ದುಃಖಿಸಿದ್ದಾರೆ.
ಭಿಕ್ಷುಕನಾದರೂ ಅದೃಷ್ಟವಂತ ವ್ಯಕ್ತಿಯಾಗಿದ್ದ ಬಸ್ಯಾನ ಅಂತ್ಯಸಂಸ್ಕಾರವನ್ನು ಅದ್ದೂರಿಯಾಗಿ ಮಾಡಲು ಹೂವಿನಹಡಗಲಿ ಜನರು ನಿರ್ಧರಿಸಿದ್ದರು. ಅದರಂತೆ ಯಾವ ಗಣ್ಯ ವ್ಯಕ್ತಿಗೂ ಕಡಿಮೆ ಇಲ್ಲದಂತೆ ಬಸ್ಯಾನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈತನ ಅಂತಿಮ ದರ್ಶನಕ್ಕೆ ಇಡೀ ಊರಿನ ಜನರೇ ಆಗಮಿಸಿದ್ದರು. ಅಂತ್ಯಸಂಸ್ಕಾರದ ವೇಳೆ ನರೆದಿದ್ದ ಜನಸ್ತೋಮದ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.