ಉಡುಪಿ: ಇಂದು (ನ.19) ಬೆಳಿಗ್ಗೆ 11.32ರಿಂದ ಸಂಜೆ 5:33ರವರೆಗೆ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದ್ದು, ದುರದೃಷ್ಟವಶಾತ್ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಪೂರ್ವ ಏಷ್ಯಾ, ಓಷಿಯಾನಿಯಾ ಪ್ರದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.
ಆದರೆ, ಕಾರ್ತೀಕ ಪೂರ್ಣಿಮೆಯ ಚಂದ್ರನನ್ನು ಶುಭ್ರ ಆಕಾಶದಲ್ಲಿ ನೋಡುವ ಅವಕಾಶ ಆಸಕ್ತರಿಗೆ ಸಿಗಲಿದೆ ಎಂದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ.
ಚಂದ್ರನು ಪ್ರತಿ ತಿಂಗಳು ಭೂಮಿಯ ಹಿಂಬದಿಯಿಂದ ಹಾದು ಹೋಗುತ್ತಾನೆ. ಈ ಸಮಯದಲ್ಲಿ ಭೂಮಿಯ ಕತ್ತಲಿನ ಭಾಗದಲ್ಲಿ ಸೂರ್ಯನ ಬೆಳಕಿನಿಂದ ಸಂಪೂರ್ಣವಾಗಿ ಪ್ರಕಾಶಿಸಲ್ಪಟ್ಟ ಚಂದ್ರನನ್ನು ನೋಡಬಹುದು. ಈ ವಿದ್ಯಮಾನವನ್ನು ಹುಣ್ಣಿಮೆ ಎನ್ನುತ್ತೇವೆ.
ಸೂರ್ಯ- ಚಂದ್ರ-ಭೂಮಿ ಬಹುತೇಕ ನೇರವಾಗಿ ಬಂದ ಸಂದರ್ಭದಲ್ಲಿ ಪೂರ್ಣ ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುವಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಎಲ್ಲ ವಸ್ತುಗಳ ನೆರಳುಗಳಲ್ಲಿ ಎರಡು ಭಾಗಗಳಿರುವಂತೆ ಭೂಮಿಯ ನೆರಳಿನಲ್ಲೂ ಎರಡು ಭಾಗಗಳಿದ್ದು, ಮಧ್ಯದ ಗಾಢ ಕತ್ತಲ ಭಾಗವನ್ನು ನೆರಳು ಹಾಗೂ ಮಸುಕಾದ ಕತ್ತಲೆಯ ಅಂಚನ್ನು ಅರೆ ನೆರಳು ಎನ್ನಲಾಗುತ್ತದೆ.
ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಿಂದ ಆವೃತಗೊಳ್ಳದೆ ಕೆಲವು ಭಾಗ ಸೂರ್ಯನ ಬೆಳಕಿನಿಂದ ಪ್ರಕಾಶಿಸಲ್ಪಟ್ಟಾಗ ಇಂತಹ ಗ್ರಹಣವನ್ನು ಪಾರ್ಶ್ವ ಚಂದ್ರ ಗ್ರಹಣ ಎನ್ನುತ್ತೇವೆ.
ನ.19 ರಂದು ರಾಹುವಿನ ಸಮೀಪದಲ್ಲಿರುವ ಚಂದ್ರನು ಬೆಳಿಗ್ಗೆ 11.32ಕ್ಕೆ ಭೂಮಿಯ ನೆರಳನ್ನು ಪ್ರವೇಶಿಸಿ ಮಧ್ಯಾಹ್ನ 2.42ಕ್ಕೆ ಗರಿಷ್ಠ ಗ್ರಹಣ ಗೋಚರಿಸುತ್ತದೆ. ಈ ಸಮಯದಲ್ಲಿ ಭೂಮಿಯಿಂದ ಚದುರಿದ ಬೆಳಕಿನಿಂದ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ. ಚಂದ್ರನ ಶೇ 99ರಷ್ಟು ಭಾಗವು ಭೂಮಿಯ ನೆರಳಿನಿಂದ ಆವೃತಗೊಳ್ಳುತ್ತದೆ. ಅಂತಿಮವಾಗಿ ಚಂದ್ರನು ಸಂಜೆ 5:33ಕ್ಕೆ ಭೂಮಿಯ ನೆರಳಿನಿಂದ ಮುಕ್ತನಾಗುತ್ತಾನೆ.
ಚಂದ್ರನು ಭೂಮಿಗೆ ಸಮೀಪವಾದ ಪುರಭೂ ಬಿಂದುವಿನಲ್ಲಿ ಬಂದಾಗ ಸಂಭವಿಸುವ ಹುಣ್ಣಿಮೆಯ ಚಂದ್ರನನ್ನು ಸೂಪರ್ ಮೂನ್ ಎಂದು ಕರೆದರೆ, ಭೂಮಿಯಿಂದ ಅತೀ ದೂರದಲ್ಲಿರುವ ಅಪಭೂ ಬಿಂದುವಿನಲ್ಲಿ ಹುಣ್ಣಿಮೆ ಸಂಭವಿಸಿದಾಗ ಹುಣ್ಣಿಮೆಯ ಚಂದ್ರನನ್ನು ಮೈಕ್ರೋಮೋನ್ ಎಂದು ಕರೆಯಲಾಗುತ್ತದೆ.
ನ.19ರಂದು ಸಂಭವಿಸುವ ಗ್ರಹಣವು ಚಂದ್ರ ಅಪಭೂ ಬಿಂದುವಿನಲ್ಲಿದ್ದಾಗ ಸಂಭವಿಸುವುದರಿಂದ ಚಂದ್ರ ಸ್ವಲ್ಪ ಸಣ್ಣದಾಗಿ ಗೋಚರಿಸುತ್ತಾನೆ. ಭೂಮಿ ಹಾಗೂ ಚಂದ್ರನ ಅಂತರದಿಂದ ಸುಮಾರು 6 ಗಂಟೆ 2 ನಿಮಿಷ ಈ ಗ್ರಹಣ ಗೋಚರಿಸುತ್ತದೆ. 1,000 ವರ್ಷಗಳಿಗೊಮ್ಮೆ ಇಂತಹ ‘ದೀರ್ಘ’ ಗ್ರಹಣ ಗೋಚರಿಸುತ್ತದೆ.
ಚಂದ್ರನು ಭೂಮಿಯ ನೆರಳಿನಿಂದ ನಿರ್ಗಮಿಸಿದಂತೆಯೇ ಭಾರತದ ಈಶಾನ್ಯ ಭಾಗದ ರಾಜ್ಯಗಳು ಚಂದ್ರೋದಯಕ್ಕೆ ಸಾಕ್ಷಿಯಾಗುತ್ತವೆ ಎಂದು ಪಿಪಿಸಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಜೆ.ವಿ.ಮೇಘನಾ ತಿಳಿಸಿದ್ದಾರೆ.