ಬೆಂಗಳೂರು: ನಗರದ ಹೆಬಗೋಡಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ತಗುಲಿದಾಗ ಮನೆಯೊಳಗಿದ್ದ ವೃದ್ಧೆಯನ್ನು ಮನೆಯ ಸಾಕು ನಾಯಿ ಕಾಪಾಡಿದ ಘಟನೆ ನಡೆದಿದೆ.
ಸಂಪಿಗೆ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ನಿನ್ನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿ ವೃದ್ಧೆ ಮತ್ತು ಸಾಕು ನಾಯಿ ‘ಅಪ್ಪು’ ಮಾತ್ರ ಇದ್ದರು.
ಮನೆಗೆ ಬೆಂಕಿ ತಗುಲುತ್ತಿದ್ದಂತೇ ನಾಯಿ ಸೆಕ್ಯುರಿಟಿ ಬಳಿ ಹೋಗಿ ಜೋರಾಗಿ ಬೊಗಳಿ ಆತನ ಗಮನ ಸೆಳೆದಿದೆ. ಬಳಿಕ ಅಪಾರ್ಟ್ ಮಂದಿಯನ್ನೂ ಜೋರಾಗಿ ಬೊಗಳಿ ಎಚ್ಚರಿಸಿದೆ. ಇದರಿಂದಾಗಿ ಎಚ್ಚೆತ್ತುಕೊಂಡ ನೆರೆಹೊರೆಯವರು ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದ್ದು, ವೃದ್ಧೆಯನ್ನು ರಕ್ಷಿಸಿದ್ದಾರೆ. ನಾಯಿಯ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯವಾಗಿಲ್ಲ. ಆದರೆ ಮನೆಯಲ್ಲಿದ್ದ ಪೀಠೋಪಕರಣಗಳು ಭಸ್ಮವಾಗಿದೆ ಎಂದು ತಿಳಿದುಬಂದಿದೆ.