ಲಕ್ನೋ: ನವ ಭಾರತಕ್ಕೆ ಮೆರುಗು ನೀಡುವಂತೆ ನಿರ್ಮಾಣವಾಗಿರುವ ಪೂರ್ವಾಂಚಲ ಎಕ್ಸ್ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು. ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನಗಳು ಲ್ಯಾಂಡ್ ಆಗಲು ಅನುಕೂಲವಾಗುವಂತೆ ಎಕ್ಪ್ರೆಸ್ವೇ ನಿರ್ಮಾಣ ಮಾಡಲಾಗಿದ್ದು, ಈ ಹೆದ್ದಾರಿ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗಲಿದೆ. ಭಾರತ ವಾಯು ಸೇನೆಗೆ ಸೇರಿದ ಸಿ-130ಜೆ ಸೂಪರ್ ಹರ್ಕುಲಸ್ ವಿಮಾನದಲ್ಲಿ ಬಂದು ಹೆದ್ದಾರಿ ಮೇಲೆ ಪ್ರಧಾನಿ ಮೋದಿ ಲ್ಯಾಂಡ್ ಆದರು. ಆ ಬಳಿಕ ಹೆದ್ದಾರಿಯನ್ನು ಉದ್ಘಾಟನೆ ಮಾಡಿ ಈ ಹಿಂದಿನ ಯುಪಿಎ ಸರ್ಕಾರ ಮತ್ತು ಯುಪಿಯಲ್ಲಿ ಆಡಳಿತ ನಡೆಸಿದ್ದ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಆ ಬಳಿಕ ಆರಂಭವಾದ ಇಂಡಿಯನ್ ಏರ್ಫೋರ್ಸ್ ಏರ್ ಶೋ ವೀಕ್ಷಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದರು. ಏರ್ ಇಂಡಿಯಾದ ಸುಖೋಯ್, ಮಿರಾಜ್ ಏರ್ಕಾರ್ಫ್ಟ್, ಮಿರಾಜ್ 2000, ಜಾಗ್ವಾರ್ ವಿಮಾನ, ಮಿಡಿಯಂ ಟ್ರಾನ್ಸ್ಪೋರ್ಟ್ ಏರ್ಕಾರ್ಫ್ಟ್ ಎಎನ್-32 ಸೇರಿದಂತೆ ವಿವಿಧ ಯುದ್ಧ ವಿಮಾನಗಳು ಪ್ರದರ್ಶನ ನೀಡಿದವು. ಹೈವೇ ಮೇಲೆ ನಡೆದ ಯುದ್ಧ ವಿಮಾನಗಳ ಕಸರತ್ತನ್ನು ಮೋದಿ ಕಣ್ತುಂಬಿಕೊಂಡರು. ಅಂದಹಾಗೇ 340 ಕಿಮೀ ಉದ್ಧ ಇರೋ ಪೂರ್ವಾಂಚಲ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ 18 ಫ್ಲೇ ಓವರ್, 7 ರೈಲ್ವೆ ಬ್ರಿಡ್ಜ್, ಉದ್ದವಾದ 7 ಫ್ಲೇ ಓವರ್, 104 ಸಣ್ಣ ಬ್ರಿಡ್ಜ್ಗಳು, 13 ಸ್ಥಳಗಳಲ್ಲಿ ಇಂಟರ್ ಚೇಂಜ್ ಮಾರ್ಗಗಳು, 217 ಅಂಡರ್ ಪಾಸ್ಗಳನ್ನು ನಿರ್ಮಾಣ ಮಾಡಲಾಗಿದೆ.