ಬೆಂಗಳೂರು : ಕಾಂಗ್ರೆಸ್ ಅಲ್ಪ ಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಗಡಿ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡ ಗೋ ಮಧುಸೂದನ್ ಬುಧವಾರ ಕಿಡಿ ಕಾರಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ನೀವು ಟಿಪ್ಪು ವಂಶಸ್ಥರಿರಬಹುದು, ಬಾಬರ್ ವಂಶಸ್ಥರಿರಬಹುದು, ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರಿರಬಹುದು, ದೇಶದ ಮೇಲೆ ದಾಳಿ ಮಾಡಿದ ಯಾವುದೇ ಆಕ್ರಮಣಕಾರರ ವಂಶಸ್ಥರಿರಬಹುದು. ಆಕ್ರಮಣ ಮಾಡಿದವರೆಲ್ಲ ನಾಶವಾಗಿದ್ದಾರೆಯೇ ವಿನಃ ದೇಶ ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ. ಇದು ದೇವಭೂಮಿ ಭಾರತ, ನೂರಾರು ವರ್ಷ ಗುಲಾಮಗಿರಿ ಅನುಭವಿಸಿದರೂ ಕೂಡ ಈ ದೇಶವನ್ನು ಕ್ರಿಶ್ಚಿಯನ್ ಮಯ, ಮುಸ್ಲಿಂಮಯ ಮಾಡಲು ಆಗಿಲ್ಲ.90% ಭಾರತೀಯರು ಹಿಂದೂಗಳಾಗಿ ಉಳಿದಿದ್ದಾರೆ. ದೇಶಕ್ಕೋಸ್ಕರ ಧರ್ಮಕ್ಕೋಸ್ಕರ ತಮ್ಮ ತಲೆ ಕೊಟ್ಟಿದ್ದಾರೆ. ಇತಿಹಾಸದಲ್ಲಿ ಯಾರೂ ತಲೆ ತಗ್ಗಿಸಿಲ್ಲ. ಹಿಂದೂಗಳು ತಾಳ್ಮೆಯಿಂದ ಇದ್ದಾರೆ, ಹಿಂದೂಗಳು ಸಹನೆಯಿಂದ ಇದ್ದಾರೆ. ಹಿಂದೂಗಳು ಹೇಡಿಗಳು ಅನ್ನೋ ಮನೋಭಾವನೆಯಿಂದ ಇರಬೇಡಿ. ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ. ನಮ್ಮನ್ನು ಕೆರಳಿಸಬೇಡಿ, ಈ ದೇಶವನ್ನು ಉಳಿಸಿಕೊಳ್ಳೋದು ಹಿಂದುಗಳಿಗೆ ಗೊತ್ತಿದೆ. ನಾವು ನಿಮ್ಮ ಯಾರ ಕೃಪೆಯಿಂದಲೂ ಬದುಕಿಲ್ಲ. ನಾವು ಭಗವಂತನ ಸೇವೆಯಲ್ಲಿ ಬದುಕಿದ್ದೇವೆ, ಇದು ಭಗವಂತ ನಿರ್ಮಾಣ ಮಾಡಿದ ದೇಶ, ಧರ್ಮ ಸಂಸ್ಕೃತಿ ಸಂಸ್ಕಾರವಿರುವಂತಹದ್ದು. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ಯಾವ ಪುಟಗೋಸಿ ಟಿಪ್ಪು ಬಗ್ಗೆ ಮಾತಾಡ್ತೀರಿ? ನಾಚಿಕೆಗೆಟ್ಟ ಕಾಂಗ್ರೆಸ್, ಇಮ್ರಾನ್ ಪ್ರತಾಪ್ ಗಡಿ ಹೇಳಿಕೆ ಅವಹೇಳನಕಾರಿ, ಅಪಮಾನಕಾರಿ. ಇದುವರೆಗೆ ರಾಮಮಂದಿರಲ್ಲ ಆಗಿಲ್ಲ ಅನ್ನುತ್ತಿದ್ದಿರಿ , ಈಗ ರಾಮ ಮಂದಿರ ಆಗಿದೆ ನೋಡಿ’ ಎಂದರು.
‘ಕರ್ನಾಟಕದಲ್ಲೇ ಟಿಪ್ಪು ಸುಲ್ತಾನ್ ಯಾರಿಗೂ ಬೇಕಾಗಿಲ್ಲ, ಟಿಪ್ಪು ಜಯಂತಿಯನ್ನು ಶ್ರೀರಂಗಪಟ್ಟಣದಲ್ಲೇ ಯಾರಾದ್ರೂ ಆಚರಣೆ ಮಾಡಿದ್ರಾ? ಇಂಥ ಹೇಳಿಕೆ ಕೊಡುವುದನ್ನು ಕಾಂಗ್ರೆಸ್ ಬಿಡಬೇಕು ಅಂತ ಎಚ್ಚರಿಕೆ ಕೊಡುತ್ತೇನೆ’ ಎಂದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ‘ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು, ನಿಮಗೆ ತಲೆ ಕತ್ತರಿಸುವುದು ಗೊತ್ತಿದೆ, ತಲೆ ತಗ್ಗಿಸುವುದು ಗೊತ್ತಿಲ್ಲ. ನಿಮಗೆ ತಲೆ ಬಾಗುವುದು ತಿಳಿದಿಲ್ಲ, ತಲೆ ಎತ್ತುವುದು ತಿಳಿದಿದೆ’ ಎಂದು ವಿವಾದಿತ ಭಾಷಣ ಮಾಡಿದ್ದರು.