ಮಂಗಳೂರು: ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದ್ದು, ಬೈಕ್ ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಯುವಕರು ಥಳಿಸಿದ್ದಾರೆ. ಅನ್ಯ ಧರ್ಮದ ಯುವತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಹಿನ್ನಲೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.
ಬೈಕ್ ಹಿಂಬಾಲಿಸಿ ಬಂದ ಯುವಕರ ತಂಡ ಥಳಿಸಿದ್ದು, ಅನ್ಯಧರ್ಮದವರ ಜೊತೆ ಓಡಾಡದಂತೆ ಯುವತಿಗೆ ಧಮ್ಕಿ ಹಾಕಲಾಗಿದೆ. ಯುವತಿ ಅಪಾರ್ಟ್ ಮೆಂಟ್ ಖಾಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಲಗೇಜ್ ಶಿಫ್ಟ್ ಮಾಡಿ ಯುವಕ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಯುವಕರ ತಂಡದಿಂದ ಥಳಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಗಳೂರಿನ ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್, ಭರತ್, ಸುಖೇಶ್ ಅವರನ್ನು ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.