ಸುಳ್ಯ: ಈ ರಸ್ತೆಗೆ ಡಾಂಬರು ಹಾಯಿಸಿ ಅದೆಷ್ಟು ದಶಕಗಳು ಕಳೆದಿದೆಯೋ ಗೊತ್ತಿಲ್ಲ. ಅಂದು ಮಾಡಿದ ಡಾಂಬರು ರಸ್ತೆಯ ಕುರುಹುಗಳು ಮಾತ್ರ ಇಲ್ಲಿ ಕಂಡುಬರುತ್ತಿದ್ದು, ಭೌಗೋಳಿಕ ಅಧ್ಯಯನ ಮಾಡುವ ಸಂಶೋಧಕರಿಗೆ, ಐತಿಹಾಸಿಕ ಉತ್ಖನನ ಮಾಡಲು ಈ ರಸ್ತೆ ಹೇಳಿ ಮಾಡಿಸಿದ ಸ್ಥಳ..! ಅಷ್ಟೇ ಅಲ್ಲ, ನೀವೇನಾದ್ರೂ ಹೊಸದಾಗಿ ಅಡ್ವೆಂಚರ್ ಮಾಡ್ಬೇಕು ಅಂತ ಮನಸ್ಸು ಮಾಡಿದ್ರೆ ಖಂಡಿತವಾಗಿ ಈ ಸ್ಥಳಕ್ಕೊಮ್ಮೆ ಭೇಟಿ ನೀಡಬಹುದು. ಕೇವಲ ಒಂದೂವರೆ ಕಿ.ಮೀ ರಸ್ತೆಯಲ್ಲಿ ಇಡೀ ವಿಶ್ವ ಪರ್ಯಟನೆ ಮಾಡಿದ ಅನುಭವ ನಿಮ್ಮದಾಗಲಿದೆ. ಇಂತಹ ಒಂದು ಪ್ರಸಿದ್ಧ ತಾಣ ಇರೋದೆಲ್ಲಿ ಅಂತ ಕೇಳ್ತೀರಾ? ಅದು ಬೇರೆಲ್ಲೂ ಅಲ್ಲ, ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಈ ರಸ್ತೆಯನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡು ನರಕಯಾತನೆ ಅನುಭವಿಸುವ ಊರು.

ಗುತ್ತಿಗಾರು ಗ್ರಾಮದ ಕಮಿಲದಿಂದ ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಸಂಪರ್ಕಿಸುವ ಬಳ್ಪ ಕ್ರಾಸ್ ವರೆಗೆ ಕೇವಲ ಒಂದೂವರೆ ಕಿ.ಮೀ ರಸ್ತೆ ಹಾಳಾಗಿ ಕೊಳೆತು ನಾರುತ್ತಿದೆ. ಆದರೂ ಈ ರಸ್ತೆಯ ಅಭಿವೃದ್ಧಿ ಬಗ್ಗೆ ತುಟಿ ಪಿಟಿಕ್ ಅನ್ನದೇ ಬಾಯ್ಮುಚ್ಚಿ ಕುಳಿತಿದ್ದಾರೆ ಇಲ್ಲಿಯ ಜನಪ್ರತಿನಿಧಿಗಳು.
ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಸಚಿವ, ಸಂಸದರವರೆಗೆ ಇದೇ ರಸ್ತೆಯನ್ನು ಬಳಸಿ ಓಡಾಡಿದರೂ ರಸ್ತೆ ದುರಸ್ತಿ ಮಾಡುವತ್ತ ಒಬ್ಬರೂ ಗಮನ ಹರಿಸಲಿಲ್ಲ.

ಚುನಾವಣೆ ಬಂದಾಗ ಭರವಸೆಯ ಮಹಾಪೂರ ಹರಿದು ಬರುತ್ತದೆಯೇ ಹೊರತು, ಅದಾದ ಬಳಿಕ “ನಾನವನಲ್ಲ”. ಕಳೆದ ಮೂರು ದಶಕಗಳಿಂದ ಡಾಂಬರು ಕಾಣದೇ ಸಂಪೂರ್ಣ ಕಿತ್ತು ಹೋಗಿರುವ ರಸ್ತೆ ಆವಾಗೊಮ್ಮೆ ಈವಾಗೊಮ್ಮೆ ಅಲ್ಲಲ್ಲಿ ಕಂಟ್ರಿ ತೇಪೆ ಹಚ್ಚಿದ್ದು ಬಿಟ್ಟರೆ ಮತ್ತೇನು ಘನಕಾರ್ಯಗಳೂ ಇಲ್ಲಿ ನಡೆದಿಲ್ಲ. ಆದರೂ ಈ ಭಾಗದ ಹಳ್ಳಿಗರು ಅವರನ್ನೇ ನಂಬಿ ಮೋಸ ಹೋಗುತ್ತಿದ್ದಾರೆ.

ಇತ್ತೀಚೆಗೆ ಕೆಲವು ರೋಸಿ ಹೋದ ಮನಸ್ಸುಗಳು ಒಂದಾಗಿ ಇನ್ನು ಇವರನ್ನು ನಂಬಿ ಕುಳಿತರೆ ಕಾರ್ಯ ಸಾಧ್ಯವಾಗದು ಎಂದು ತಾವೇ ಡಿಸಿ ಗೆ ಪತ್ರ ಬರೆದು ರಸ್ತೆಯನ್ನು ಸ್ವಂಯ ಖರ್ಚಿನಲ್ಲಿ ದುರಸ್ತಿಗೊಳಿಸಲು ಫರ್ಮಿಷನ್ ಕೊಡಿ ಅಂತ ಕೇಳಿದ್ರು. ಈ ಸಂದರ್ಭದಲ್ಲಿ ಮತ್ತೆ ಹಲವರು ಎಡ-ಬಲ, ಕಮ್ಯುನಿಸ್ಟ್ ಚಿಂತನೆ ಮಾಡಿ ಒಂದಾದ ಮನಸ್ಸುಗಳನ್ನು ಬೇರ್ಪಡಿಸುವ ಮನಸ್ಸನ್ನೂ ಮಾಡಿದರು.
ಇಷ್ಟು ವರ್ಷಗಳಿಂದ ಈ ರಸ್ತೆಯನ್ನು ಕಷ್ಟಪಟ್ಟು ಅನುಭವಿಸಿದ್ದು, ಬಹುಶಃ ಓಟ್ ಬ್ಯಾಂಕ್ ಗಾಗಿ ಇರಬಹುದೋ ಏನೋ ಗೊತ್ತಿಲ್ಲ. ಆದರೆ ಈ ರಸ್ತೆಯಲ್ಲಿ ನೀವೊಮ್ಮೆ ಓಡಾಡಿದರೆ ” ಹೀಗೂ ಉಂಟೇ” ಎಂದು ಅನ್ನಿಸದಿರದು.