ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ರ ಐವರು ಸಂಬಂಧಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಟ್ರಕ್ಗೆ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಎಸ್ಯುವಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಟ್ರಕ್ ಚಾಲಕ ಹಾಗೂ ಸಹಾಯಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಮೃತ ಪಟ್ಟ ಆರು ಮಂದಿ ಹರಿಯಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಒ.ಪಿ ಸಿಂಗ್ ಸಹೋದರಿಯ ಅಂತ್ಯಕ್ರಿಯೆ ಮುಗಿಸಿ ಪಾಟ್ನಾದಿಂದ ಜಮುಯಿಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ.
ಒ.ಪಿ ಸಿಂಗ್ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಸಹೋದರಿಯ ಪತಿ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ಲಾಲ್ಜೀತ್ ಸಿಂಗ್, ನೆಮಾನಿ ಸಿಂಗ್, ಅಮಿತ್ ಶಂಕರ್ ಅಲಿಯಾಸ್ ಚಂದ್ರ ಸಿಂಗ್, ಸುನೀತಾ ದೇವಿ, ಅನಿತಾ ದೇವಿ ಹಾಗೂ ಚಾಲಕ ಚೇತನ್ ಕುಮಾರ್ ಎಂದು ಗುರುತಿಸಲಾಗಿದೆ.