ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಿತ್ಯ ಗೋಪೂಜೆ ಪಡೆಯುತ್ತಿದ್ದ ಹಿರಿಯ ಹಸು ಕೆಂಪಿ ವಯೋಸಹಜತೆಯಿಂದ ರವಿವಾರ ಸಾವನ್ನಪ್ಪಿದೆ.
ಹಸು ಸುಮಾರು 20 – 22 ವರ್ಷದಿಂದ ಕ್ಷೇತ್ರದಲ್ಲಿ ನಿತ್ಯ ಗೋಪೂಜೆ ಭಾಗ್ಯವನ್ನು ಪಡೆದಿತ್ತು. ಈ ವರ್ಷವು ದೀಪಾವಳಿಯಂದು ಈ ಹಸುವಿಗೆ ಪೂಜೆ ನೆರವೇರಿಸಲಾಗಿತ್ತು. ಇದೇ ಇದರ ಕೊನೆಯ ದೀಪಾವಳಿಯ ಪೂಜೆ ಆಗಿದೆ ಎಂಬ ಮಾತು ಕೇಳಿಬಂದಿದೆ. ಈ ಹಸು ಸುಮಾರು 13 ಕರುಗಳನ್ನು ಈವರೆಗೆ ಹಾಕಿತ್ತು ಎಂದು ದೇವಳದವರು ಮಾಹಿತಿ ನೀಡಿದ್ದಾರೆ.
ಪ್ರೀತಿಯ ಕೆಂಪಿ;
ಕೆಂಪಿ ಕಳೆದ 22 ವರ್ಷಗಳಿಂದ ದೇವಳದಿಂದ ಗೋಪೂಜೆ ಭಾಗ್ಯ ಪಡೆದಿತ್ತು. ಮುಂಜಾನೆ ಹಟ್ಟಿಯಿಂದ ಅಲ್ಲಿಯ ನಿರ್ವಾಹಕರು ಕೆಂಪಿ ಹಸುವಿನ ಹಗ್ಗ ಬಿಚ್ಚಿದ ಕೂಡಲೇ ಕೆಂಪಿ ದೇವಳದ ಗುಡಿ ಮುಂದೆ ಬಂದು ನಿಂತು ಮಹಾಪೂಜೆ ವೀಕ್ಷಿಸಿ, ಪ್ರಸಾದ ಸ್ವೀಕರಿಸಿದ ಕೂಡಲೇ ಅಲ್ಲಿಂದ ಮರಳಿ ಹಟ್ಟಿಗೆ ಸೇರುತ್ತಿತ್ತು. ಇದು ತನ್ನ ವಿಶೇಷತೆಯಿಂದ ಎಲ್ಲರ ಪ್ರೀತಿಗೂ ಪಾತ್ರವಾಗಿತ್ತು. ದೇವಳದ ವತಿಯಿಂದ ಹಸುವಿಗೆ ಪ್ರಸಾದ ಹಾಕಿ ಅದರ ಅಂತಿಮ ಕಾರ್ಯ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ.