ಮಣಿಪುರ: ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಬೆಂಗಾವಲು ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿಯ ಕುಟುಂಬದವರು ಸೇರಿ 7 ಮಂದಿ ಸೈನಿಕರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಣಿಪುರದ ಮ್ಯಾನ್ಮಾರ್ ಗಡಿಯ ಚುರಾಚಂದಪುರ ಜಿಲ್ಲೆಯಲ್ಲಿ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎಂದು ವರದಿ ತಿಳಿಸಿದೆ. ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಅಸ್ಸಾಂ ರೈಫಲ್ಸ್‌ಗೆ ಸೇರಿದ ಸೇನಾ ವಾಹನದ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಿದೆ. ದಾಳಿ ನಡೆದ ಜಾಗವು ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಇಂಫಾಲ್‌ನಿಂದ ೧೦೦ ಕಿ,.ಮೀ ದೂರದಲ್ಲಿದೆ.
ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು, ಸೇನಾಧಿಕಾರಿ ಮತ್ತು ಅವರ ಕುಟುಂಬ ಸದಸ್ಯರು ಸಾವಿಗೀಡಾಗಿರುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವುದಾಗಿ ಅವರು ತಿಳಿಸಿದ್ಧಾರೆ.
‘ಸೇನಾಧಿಕಾರಿ ಕುಟುಂಬ ಮತ್ತು ಸೇನಾ ಸಿಬ್ಬಂದಿ ಸಾವಿಗೀಡಾದ 46 ಎಆರ್‌ನ ಬೆಂಗಾವಲು ಪಡೆ ಮೇಲೆ ನಡೆದ ಹೇಡಿತನದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಉಗ್ರಗಾಮಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ರಾಜ್ಯ ಪಡೆಗಳು ಮತ್ತು ಪ್ಯಾರಾ ಮಿಲಿಟರಿ ಈಗಾಗಲೇ ತೊಡಗಿವೆ’ ಎಂದು ಸಿಂಗ್ ಟ್ವಿಟ್ಟರ್‌ಲ್ಲಿ ತಿಳಿಸಿದ್ದಾರೆ.