ಸುಳ್ಯ: ಪ್ರಕೃತಿ ಹಲವು ವಿಸ್ಮಯಗಳನ್ನು ಸೃಷ್ಠಿ ಮಾಡುತ್ತಿರುತ್ತದೆ. ವೈಜ್ಞಾನಿಕ ಯುಗದಲ್ಲೂ ಅಚ್ಚರಿಗೆ ಒಳಗಾಗುವ ವಿಚಾರಗಳು ಈ ಪ್ರಕೃತಿಯಲ್ಲಿ ಅಡಗಿದೆ. ಜನರ ನಂಬಿಕೆ ಮತ್ತು ಪ್ರಾಕೃತಿಕ ವಿಸ್ಮಯದಿಂದ ಇಂದಿಗೂ ಕುತೂಹಲಕಾರಿಯಾದ ಹಲವು ಅಂಶಗಳು ನಿಸರ್ಗದಲ್ಲಿವೆ. ಅಂತಹ ವಿಸ್ಮಯಗಳ ತಾಣ ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ಸನ್ನಿಧಿ.
ಈ ದೇವಾಲಯದಲ್ಲಿ ಇಂದಿಗೂ ಅಚ್ಚರಿ ಮೂಡಿಸುವಂತಹ ಘಟನೆಗಳು ನಡೆಯುತ್ತಿದೆ. ದೇವಸ್ಥಾನದ ಬಳಿಯ ಹಳ್ಳದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕಿದರೆ ಸಾಕು ಮೈ ಮೇಲಿದ್ದ ಚರ್ಮ ರೋಗಗಳೆಲ್ಲಾ ಶಮನವಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಭಕ್ತರದ್ದು.
ಪುರಾತನ ಕ್ಷೇತ್ರವಾದ ತೊಡಿಕಾನ ಮಲ್ಲಿಕಾರ್ಜುನ ಕ್ಷೇತ್ರದ ಪಕ್ಕದಲ್ಲೇ ಹರಿಯುವ ನದಿಯಲ್ಲಿ ಸಾವಿರಾರು ಸಂಖ್ಯೆಯ ಮಹಶೀರ್ ಮೀನುಗಳಿದ್ದು, ಈ ಮೀನುಗಳಿಗೆ ಅಕ್ಕಿ ಹಾಗೂ ಹೊದಲು ಹಾಕಿ ಪ್ರಾರ್ಥನೆ ಮಾಡಿಕೊಂಡಲ್ಲಿ ಎಲ್ಲಾ ರೀತಿಯ ಚರ್ಮರೋಗಗಳು ಮಾಯವಾಗುತ್ತದೆ ಎನ್ನುವ ನಂಬಿಕೆಯಿದೆ.
ಕಣ್ವ ಮಹರ್ಷಿಯು ತೋಡಿಕಾನ ಕ್ಷೇತ್ರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು ಎನ್ನುವ ಐತಿಹ್ಯ. ಕಣ್ವ ಮಹರ್ಷಿಗಳು ತೋಡಿಕಾನದ ಕಾನನದ ನಡುವೆಯೇ ತಮ್ಮ ತಪಸ್ಸನ್ನು ಮಾಡುತ್ತಿದ್ದ ಸಮಯದಲ್ಲಿ ಕ್ಷೇತ್ರದ ಪಕ್ಕದಲ್ಲೇ ಇರುವ ದೇವರಗುಂಡಿ ಎನ್ನುವ ಜಲಪಾತದಿಂದ ಶಿವಲಿಂಗವನ್ನು ತೋಡಿಕಾನ ಕ್ಷೇತ್ರಕ್ಕೆ ತರಲು ನಿರ್ಧರಿಸುತ್ತಾರೆ.
ಈ ಸಂದರ್ಭದಲ್ಲಿ ಕಣ್ವ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಮಹರ್ಷಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಶಿವನ ಜೊತೆಗೆ ವಿಷ್ಣುವೂ ಮತ್ಸರೂಪದಲ್ಲಿ ಬಂದು ಮಹರ್ಷಿಯ ಇಚ್ಛೆಯಂತೆ ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ತೋಡಿಕಾನ ಕ್ಷೇತ್ರ ತಲುಪುತ್ತಾರೆ. ಶಿವನು ಮತ್ಸ್ಯ ವಾಹನನಾಗಿ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುತ್ತಾನೆ. ಕಣ್ವ ಮಹರ್ಷಿಗಳು ವಿಷ್ಣುವನ್ನು ಪ್ರಾರ್ಥಿಸಿ ಶಿವನ ಜೊತೆಗೆ ವಿಷ್ಣುವೂ ಕ್ಷೇತ್ರದಲ್ಲಿ ಸಾನಿಧ್ಯ ಪಡೆಯಬೇಕೆಂದು ಇಚ್ಚಿಸುತ್ತಾರೆ. ಈ ಕಾರಣಕ್ಕಾಗಿ ವಿಷ್ಣುವು ಮತ್ಸರೂಪದಲ್ಲಿ ಇಂದಿಗೂ ಈ ದೇವರಗುಂಡಿ ತೊರೆಯಲ್ಲಿ ನೆಲೆಸಿದ್ದಾನೆ ಎನ್ನುವುದು ಕ್ಷೇತ್ರ ಪುರಾಣವಾಗಿದೆ.
ಈ ಕಾರಣಕ್ಕಾಗಿಯೇ ಈ ತೊರೆಯಲ್ಲಿ ಲಕ್ಷಾಂತರ ಸಂಖ್ಯೆಯ ಮೀನುಗಳಿದ್ದು, ಈ ಎಲ್ಲಾ ಮೀನುಗಳು ತೋಡಿಕಾನ ಕ್ಷೇತ್ರದ ಪಕ್ಕದಲ್ಲೇ ನೆಲೆ ನಿಂತಿವೆ. ದೇಹಕ್ಕೆ ಕಾಡುವ ಚರ್ಮರೋಗಾಧಿಗಳ ನಿವಾರಣೆಗೆ ಇಲ್ಲಿಗೆ ಬಂದು ಪ್ರಾರ್ಥಿಸಿಕೊಂಡಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ. ಮೀನುಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಹಾಗೂ ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತೇನೆಂದು ಪ್ರಾರ್ಥಿಸಿಕೊಂಡಲ್ಲಿ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವುದಕ್ಕೆ ಹಲವು ಉದಾಹರಣೆಗಳೂ ಇವೆ.
ಕೇವಲ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರೂ ಬಂದು ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತಿದ್ದಾರೆ. ಅಲ್ಲದೆ ತೋಡಿಕಾನ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ಅನ್ನ ಪ್ರಸಾದವನ್ನು ಮೊದಲು ಈ ಮೀನುಗಳಿಗೆ ಹಾಕುವ ಸಂಪ್ರದಾಯವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.
ಹರಕೆ ತೀರಿಸಿಕೊಳ್ಳಲು ದೇವರಗುಂಡಿ ತೊರೆಯ ಬಳಿ ಬರುವ ಭಕ್ತಾಧಿಗಳ ಕಾಲಿಗೆ ಕಚಗುಳಿಯಿಡುವ ಈ ಮೀನುಗಳು ಭಕ್ತರ ಮನಸ್ಸಿಗೆ ಮುದವನ್ನೂ ನೀಡುತ್ತದೆ. ‘ದೇವರಮೀನು’ಗಳೆಂದೇ ಕರೆಯಲ್ಪಡುವ ಈ ಮೀನುಗಳನ್ನು ಹಿಡಿಯುವುದು, ಕೊಲ್ಲುವುದು ನಿಷಿದ್ಧ.