ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ವಕೀಲ ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕೌಟ್ ನೋಟೀಸ್ ಜಾರಿಗೊಳಿಸಿದ್ದಾರೆ.
ಆರೋಪಿ ರಾಜೇಶ್ ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಹೇಳಿ ನೋಟೀಸನ್ನು ಬಸ್ ನಿಲ್ದಾಣ, ಹೊಟೇಲ್, ದೇಶದ ಎಲ್ಲ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಈ ಲುಕ್ ಔಟ್ ನೋಟೀಸ್ ಹೋಗಲಿದೆ.
ಇನ್ನು ಈ ಲುಕ್ಔಟ್ ನೋಟೀಸ್ ನಿಂದಾಗಿ ಆರೋಪಿಯು ವಿದೇಶಕ್ಕೆ ಪರಾರಿಯಾಗುವುದನ್ನು ತಪ್ಪಿಸುವುದರ ಜೊತೆಗೆ ತಲೆಮರೆಸಿಕೊಂಡು ಸಂಚರಿಸುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ ವಿಮಾನ ನಿಲ್ದಾಣಗಳಿಗೆ ತೆರಳಿದ ಕೂಡಲೇ ಅಲ್ಲಿನ ಭದ್ರತಾ ಅಧಿಕಾರಿಗಳು ಈತನನ್ನು ಪತ್ತೆ ಮಾಡಲಿದ್ದಾರೆ. ಇನ್ನು ವಕೀಲ ರಾಜೇಶ್ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಪೊಲೀಸರು ಈಗಾಗಲೇ ಸೀಜ್ ಮಾಡಿದ್ದಾರೆ.
ಪ್ರಕರಣದ ತನಿಖೆಗಾಗಿ ಮಂಗಳೂರು ಪೊಲೀಸರನ್ನು ಒಳಗೊಂಡ ಆರು ತಂಡವನ್ನು ರಚಿಸಲಾಗಿದ್ದು, ವಕೀಲನ ಪತ್ತೆಗಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಪೊಲೀಸರ ನೆರವನ್ನೂ ಮಂಗಳೂರು ಪೊಲೀಸರು ಕೇಳಿದ್ದಾರೆ ಎಂದು ಹೇಳಲಾಗಿದೆ. ಸದ್ಯ ವಕೀಲ ರಾಜೇಶ್ ತಿರುಪತಿ, ಚೆನ್ನೈ, ಹೈದರಾಬಾದ್ ಹೀಗೆ ವಿವಿಧ ಕಡೆಗಳಿಗೆ ತೆರಳುತ್ತಿದ್ದು ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ. ಹೀಗಾಗಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಲುಕೌಟ್ ನೋಟೀಸನ್ನು ಬರೆಯಲಾಗಿದ್ದು, ಅದನ್ನು ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.