Ad Widget .

ಗ್ರಾಹಕರಿಗೆ ಅಗ್ಗದ ದರದಲ್ಲಿ ಮರಳು ಒದಗಿಸಲು ಕ್ರಮ| ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಸ್ತು|

Ad Widget . Ad Widget .

ಬೆಂಗಳೂರು: ಗ್ರಾಹಕರಿಗೆ ಅತ್ಯಂತ ಅಗ್ಗದ ದರದಲ್ಲಿ ಹಾಗೂ ಸುಲಭವಾಗಿ ಮರಳು ಒದಗಿಸಲು ರಾಜ್ಯ ಸರಕಾರ ‘ನೂತನ ಮರಳು ನೀತಿ’ಯನ್ನು ಜಾರಿಗೊಳಿಸಲು ಸಚಿವ ಸಂಪುಟ ಮಹತ್ವದ ತೀರ್ಮಾನ ಮಾಡಿದೆ.

Ad Widget . Ad Widget .

ಸೋಮವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಮಾಡಿದ್ದು, ಕನಿಷ್ಠಪಕ್ಷ ಒಂದು ಲಾರಿ ಲೋಡ್ ಮರಳು 10ಸಾವಿರ ರೂ.ಗಳಿಂದ 12ಸಾವಿರ ರೂ.ಗಳಿಗೆ ದೊರಕಿಸಿಕೊಡಲು ಉದ್ದೇಶಿಸಿದ್ದು, ಮರಳು ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ತರಲು ಮುಂದಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಧುಸ್ವಾಮಿ, ‘ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಟನ್ ಮರಳಿಗೆ 300 ರೂ., ನದಿಪಾತ್ರ ವ್ಯಾಪ್ತಿಯ ಮರಳಿಗೆ ಪ್ರತಿಟನ್‍ಗೆ 700 ರೂ.ಗಳನ್ನು ಹೊಸ ಮರಳು ನೀತಿ ಅನ್ವಯ ನಿಗದಿ ಮಾಡಲಾಗಿದೆ. ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ಒದಗಿಸಲು ಗ್ರಾ.ಪಂ.ವ್ಯಾಪ್ತಿಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸರಕಾರಿ ಕಾಮಗಾರಿಗಳಿಗೂ ಸುಲಭ ರೀತಿಯಲ್ಲಿ ಮರಳು ದೊರಕಿಸಲಾಗುವುದು. ಗ್ರಾ.ಪಂ.ವ್ಯಾಪ್ತಿಯಲ್ಲಿ ತೆಗೆಯುವ ಮರಳಿಗೆ ಶೇ.50ರಷ್ಟು ರಾಜಸ್ವ(ರಾಯಲ್ಟಿ)ವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.25ರಷ್ಟು ರಾಜಸ್ವವನ್ನು ಸರಕಾರಕ್ಕೆ ಮತ್ತು ಉಳಿದ ಶೇ.25ರಷ್ಟು ಮೊತ್ತವನ್ನು ಗ್ರಾ.ಪಂ.ವ್ಯಾಪ್ತಿಯ ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಸೂಚಿಸಲಾಗಿದೆ’ ಎಂದು ಮಾಧುಸ್ವಾಮಿ ತಿಳಿಸಿದರು.

‘ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ತಾಲೂಕು ಮಟ್ಟದಲ್ಲಿ ಜಿಲ್ಲಾ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ರಾಜ್ಯಮಟ್ಟದ ಸಮಿತಿಯಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಮರಳು ಗಣಿಗಾರಿಕೆಯ ಬಗ್ಗೆ ಸಮಿತಿ ನಿಗಾ ವಹಿಸಲಿದೆ ಎಂದು ಮಾಧುಸ್ವಾಮಿ ವಿವರ ನೀಡಿದರು.

ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ:
‘ಕರಾವಳಿ ತೀರ ಪ್ರದೇಶದಲ್ಲಿ ಯಂತ್ರಗಳನ್ನು ಬಳಕೆ ಮಾಡದೆ ಸಂಪ್ರದಾಯಿಕ ರೀತಿಯಲ್ಲಿ ಮಾನವರ ಮೂಲಕ ಮುಳುಗಿ ನದಿಯಿಂದ ಮರಳು ತೆಗೆಯುವುದಕ್ಕೆ ಅವಕಾಶ ನೀಡಿದೆ. ಆದರೆ, ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಮರಳು ತೆಗೆಯಬೇಕು ಎಂಬುದರ ಕುರಿತು ಆಯಾ ಜಿಲ್ಲೆಗಳಿಂದ ವರದಿ ತರಿಸಿ ಸಮಿತಿ ತೀರ್ಮಾನ ಮಾಡಲಿದೆ’ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಯಂತ್ರಗಳನ್ನು ಬಳಕೆ ಮಾಡಿ ಮರಳು ತೆಗೆಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಅಲ್ಲದೆ, ಮುಳುಗಿ ಮರಳು ತೆಗೆಯುವ ಜನರ ಬದುಕಿಗೆ ಅನ್ಯಾಯ ಆಗಬಾರದೆಂಬ ಉದ್ದೇಶದಿಂದ ಮಾನವರ ಮೂಲಕ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ಆದರೆ, ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ನೂತನ ಮರಳು ನೀತಿಯಲ್ಲಿ ಆನ್‍ಲೈನ್ ಮೂಲಕವೂ ಮರಳನ್ನು ಖರೀದಿಸಲು ಅವಕಾಶ ನೀಡಿದ್ದು, ಸರಕಾರವು ಮರಳು ಬ್ಲಾಕ್‍ಗಳನ್ನು ಗುರುತಿಸಿ ಮಾರಾಟ ಮಾಡಲಿದೆ. ಒಟ್ಟಾರೆ ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ದೊರಕಿಸಿ ಕೊಡಲು ಈ ನೀತಿಯನ್ನು ತರಲಾಗಿದೆ ಎಂದು ಅವರು ವಿವರ ನೀಡಿದರು.

ಪಟ್ಟಾ ಜಮೀನಿನಲ್ಲಿ ನಿಷೇಧ: ನೂತನ ಮರಳು ನೀತಿ ಅನ್ವಯ ಹಳ್ಳ, ತೊರೆಗಳು ಮತ್ತು ಕೆರೆಗಳಿಂದ ತೆಗೆದ ಮರಳನ್ನು ಸ್ಥಳೀಯವಾಗಿ ಬಳಸಿಕೊಳ್ಳಲು ಅವಕಾಶವಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಹುದು. ಪಟ್ಟಾ ಜಮೀನುಗಳಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಪಟ್ಟಾ ಜಮೀನಿನಲ್ಲಿ ಮರಳು ತೆಗೆಯಲು ಅನುಮತಿ ನೀಡುವ ಬಗ್ಗೆ ಜಿಲ್ಲಾ ಮರಳು ಸಮಿತಿ ತೀರ್ಮಾನಿಸಲಿದೆ ಎಂದು ಅವರು ತಿಳಿಸಿದರು.

Leave a Comment

Your email address will not be published. Required fields are marked *