ಬೆಂಗಳೂರು: ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪುದುಚೆರಿಯಲ್ಲಿ ನವೆಂಬರ್ 11ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗಲಿದ್ದು, ತಮಿಳುನಾಡು, ಮಹಾರಾಷ್ಟ್ರ, ಪುದುಚೆರಿ, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಕರಾವಳಿಯಲ್ಲಿ ನವೆಂಬರ್ 11ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ನವೆಂಬರ್ 10ರಿಂದ 11ರ ಅವಧಿಯಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆ ಉಂಟಾಗಿದೆ. ಇದರ ಪ್ರಭಾವದಿಂದ ಮುಂದಿನ 24 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ.
ಕೇರಳ, ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ವ್ಯಾಪಕವಾದ ಹಗುರದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 4 ದಿನಗಳಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನ. 10 ಮತ್ತು ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ಇದೇ ಅವಧಿಯಲ್ಲಿ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲೂ ಸಹ ಪ್ರತ್ಯೇಕ ಸ್ಥಳಗಳಲ್ಲಿ ಮಳೆ ಬೀಳುವ ಸಾಧ್ಯತೆಯಿದೆ.
ಕೇರಳದ ಅನೇಕ ಜಿಲ್ಲೆಗಳಿಗೆ ನವೆಂಬರ್ 11ರವರೆಗೆ ಹವಾಮಾನ ಇಲಾಖೆಯಿಂದ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ರಾತ್ರಿಯವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರದ ದಕ್ಷಿಣ ಕರಾವಳಿ, ಕರ್ನಾಟಕದ ದಕ್ಷಿಣ ಒಳನಾಡು, ರಾಯಲಸೀಮಾ, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಯಲಸೀಮಾ, ದಕ್ಷಿಣ ಒಳ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚಿನ ಸಹಿತ ಮಳೆಯಾಗುವ ಸಂಭವವಿದೆ.
ನಾಳೆ(ನ.9)ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ದಕ್ಷಿಣ ಕರಾವಳಿ, ರಾಯಲಸೀಮಾ, ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ರಾಯಲಸೀಮಾ, ಕರಾವಳಿ ಮತ್ತು ದಕ್ಷಿಣ ಒಳನಾಡು ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಕೇರಳ ಮತ್ತು ಮಾಹೆಯಲ್ಲಿ ಗುಡುಗು ಮಿಂಚಿನ ಸಹಿತ ಮಳೆಯಾಗುವ ಸಂಭವವಿದೆ.
ದಕ್ಷಿಣ ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ಪಕ್ಕದ ಮಧ್ಯ ಭಾಗಗಳು, ನೈಋತ್ಯ ಮತ್ತು ಪಕ್ಕದ ಪಶ್ಚಿಮ ಕೇಂದ್ರ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಆಂಧ್ರಪ್ರದೇಶ- ತಮಿಳುನಾಡು ಕರಾವಳಿ ಮತ್ತು ಮನ್ನಾರ್ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಈ ಪ್ರದೇಶಗಳಿಗೆ ಮೀನುಗಾರರು ತೆರಳದಂತೆ ಸೂಚಿಸಲಾಗಿದೆ.