ದುಬೈ : ಟಿ20 ವಿಶ್ವಕಪ್ ಪಂದ್ಯಾವಳಿಯ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ಥಾನವನ್ನು ಅಧಿಕಾರಯುತವಾಗಿ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ್ದು, ಭಾರತ ತಂಡದ ಕನಸು ಭಗ್ನಗೊಂಡಿದೆ. ಅಫ್ಘಾನ್ ತಂಡದ ಗೆಲುವನ್ನು ನಂಬಿಕೊಂಡಿದ್ದ ಭಾರತಕ್ಕೆ ಮೊದಲೆರಡು ಪಂದ್ಯಗಳ ಸೋಲು ಮತ್ತೆ ಕಾಡುವಂತೆ ಮಾಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ಥಾನ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಭಾರತೀಯ ಆಶಾವಾದಿಗಳಿಗೆ ನಿರಾಸೆ ಮೂಡಿಸಿತು.
ಗುರಿ ಬೆನ್ನಟ್ಟಿದ ಕಿವೀಸ್ ಪಡೆ 18.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 125 ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್ ಗೆ ಜಿಗಿಯಿತು.
ಈ ಜಯದೊಂದಿಗೆ ನ್ಯೂಜಿಲೆಂಡ್ ತಂಡವು ಸೆಮಿಫೈನಲ್ಗೇರಿದರೆ, ಅತ್ತ ಟೀಮ್ ಇಂಡಿಯಾ ವಿಶ್ವಕಪ್ನಿಂದ ಹೊರಬಿದ್ದಿದೆ. ಏಕೆಂದರೆ ನ್ಯೂಜಿಲೆಂಡ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಸೆಮಿಫೈನಲ್ಗೇರುವ ಅವಕಾಶ ಟೀಮ್ ಇಂಡಿಯಾಗಿತ್ತು. ಇದೀಗ ನ್ಯೂಜಿಲೆಂಡ್ ಗೆದ್ದು 8 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ನಮೀಬಿಯಾ ವಿರುದ್ದ ಔಪಚಾರಿಕ ಪಂದ್ಯವಾಡಬೇಕಿದೆ.