ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಸಕ್ಕರೆ ಬೆಲೆಗಳು ಗುರುವಾರ ಪೆಟ್ರೋಲ್ ಬೆಲೆಯನ್ನು ಮೀರಿವೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ನಿಗ್ರಹಿಸಲು ಕೆಲಸ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ವಿವಿಧ ನಗರಗಳಲ್ಲಿ ಸಕ್ಕರೆ ಕೆಜಿಗೆ 150 ರೂ.ಗೆ ಮಾರಾಟವಾಗುತ್ತಿದ್ದು, ಪ್ರಸ್ತುತ ದೇಶದಲ್ಲಿ ಪೆಟ್ರೋಲ್ ಲೀಟರ್ಗೆ 138.30 ರೂ.ಗೆ ಮಾರಾಟವಾಗುತ್ತಿದೆ. ಪೇಶಾವರದ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸಕ್ಕರೆ ದರ 8 ರೂಪಾಯಿ ಏರಿಕೆಯಾಗಿದೆ.
ಸಕ್ಕರೆ ವಿತರಕರ ಸಂಘದ ಅಧ್ಯಕ್ಷರು ಮಾತನಾಡಿ, ‘ಸಕ್ಕರೆಯನ್ನು ಕೆಜಿಗೆ 140 ರೂ.ಗೆ ಸಗಟು ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಚಿಲ್ಲರೆ ಬೆಲೆ ಕೆಜಿಗೆ 145 ರಿಂದ 150 ರೂ.ಗೆ ಏರಿಕೆಯಾಗಿದೆ’ ಎಂದಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಈ ನಡುವೆ, ಲಾಹೋರ್‌ನಲ್ಲಿ ನಿನ್ನೆ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆಜಿಗೆ 126 ರೂಪಾಯಿಗಳಾಗಿದ್ದು, ಸಕ್ಕರೆ ವಿತರಕರು ಅಕ್ರಮ ಲಾಭ ಗಳಿಸಲು ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರಾಚಿಯಲ್ಲಿ, ಸಕ್ಕರೆಯ ಎಕ್ಸ್-ಮಿಲ್ ಬೆಲೆ ಈಗ ಇತಿಹಾಸದಲ್ಲಿ ಅತ್ಯಧಿಕ ಮಟ್ಟಕ್ಕೆ ತಲುಪಿದೆ, ಕೆಜಿಗೆ ರೂ 142 ಆಗಿದೆ, ಹಿಂದಿನ ದಿನಕ್ಕಿಂತ ರೂ 12 ಹೆಚ್ಚಾಗಿದೆ. ಕ್ವೆಟ್ಟಾದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬರುತ್ತಿದ್ದು, ಸಕ್ಕರೆ ಬೆಲೆ ಕೆಜಿಗೆ 124 ರಿಂದ 129 ರೂ.ಗೆ ಏರಿಕೆಯಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.